ಬೆಂಗಳೂರು
ಬೆಂಗಳೂರು ನಗರದ ಕೆಆರ್ ಮಾರುಕಟ್ಟೆ ಸುತ್ತಲಿನ ಪುರಾತನ ಸ್ಥಳಗಳಿಗೆ ಭೇಟಿ ನೀಡಲು ಪರದಾಡುವ ಅವಶ್ಯಕತೆ ಇಲ್ಲ. ಕೆಆರ್ ಮಾರುಕಟ್ಟೆ ಮೆಟ್ರೋ ನಿಲ್ದಾಣದಿಂದ ಹೊರಗೆ ಬಂದ ಕೂಡಲೇ ಕಾಣುವ “ಬನ್ನಿ ನೋಡಿ” ಸೂಚನಾ ಫಲಕ ನಿಲ್ದಾಣದ ಸುತ್ತಮುತ್ತಲಿರುವ ಪುರಾತನ ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತದೆ. ಈ ಮಾರ್ಗದರ್ಶನವನ್ನು ಅನುಸರಿಸುವ ಮೂಲಕ ನೀವು ಸುಲಭವಾಗಿ ಪುರಾತನ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ.
ಕೆಆರ್ ಮಾರುಕಟ್ಟೆ ಮೆಟ್ರೋ ನಿಲ್ದಾಣದ ಯಾವುದೇ ದ್ವಾರದಿಂದ ಹೊರ ಬಂದರೂ ನಿಮಗೆ ಬನ್ನಿ ನೋಡಿ ಸೂಚನಾ ಫಲಕ ಕಾಣುತ್ತದೆ. ಈ ಸೂಚನಾ ಫಲಕದಲ್ಲಿ 20ನೇ ಶತಮಾನಕ್ಕೆ ಸೇರಿದ ಕೋಟೆ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನ ಮತ್ತು ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಬಗ್ಗೆ ಮಾಹಿತಿ ಇರುತ್ತದೆ. ಜೊತೆಗೆ ಈ ಸ್ಥಳಗಳಿಗೆ ಹೇಗೆ ಹೋಗಬೇಕು ಎಂಬ ಮಾರ್ಗದರ್ಶಿ ಮ್ಯಾಪ್ ಸಹಿತ ಇರುತ್ತದೆ. ಈ ಸೂಚನಾ ಫಲಕ ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಮಾರ್ಗದರ್ಶನ ನೀಡುತ್ತದೆ.
ಬೆಂಗಳೂರು ಕೋಟೆಯ ಸುತ್ತ 1.5 ಕಿಮೀ ವ್ಯಾಪ್ತಿಯಲ್ಲಿ 15 ಬನ್ನಿ ನೋಡಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಮೆಟ್ರೋ ನಿಲ್ದಾಣದ ಪ್ರತಿಯೊಂದು ದ್ವಾರದ ಮುಂಭಾಗ ಈ ರೀತಿಯಾದ ಸೂಚನಾ ಫಲಕವನ್ನು ಅವಳಡಿಸಲಾಗಿದೆ. ಈ ಸೂಚನಾ ಫಲಕ ಬೆಂಗಳೂರಿನ 16 ರಿಂದ 20ನೇ ಶತಮಾನದ ಇತಿಹಾಸ ತಿಳಿಸುತ್ತದೆ.
ಬನ್ನಿ ನೋಡಿ ಸೂಚನಾ ಫಲಕ ಪರಿಕಲ್ಪನೆಯನ್ನು ನಮ್ಮ ಮೆಟ್ರೋ ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯ ಸಹಭಾಗಿತ್ವದಲ್ಲಿ ಸೆನ್ಸಿಂಗ್ ಲೋಕಲ್, ಅರ್ಬನ್ ಲಿವಿಂಗ್ ಲ್ಯಾಬ್ ಮತ್ತು ನೇಟಿವ್ ಪ್ಲೇಸ್ ಸಂಸ್ಥೆಗಳು ಜಂಟಿಯಾಗಿ ಪ್ರಾರಂಭಿಸಿವೆ.
ಬನ್ನಿ ನೋಡಿ ಸೂಚನಾ ಫಲಕ ಕುರಿತಾಗಿ ಸೆನ್ಸಿಂಗ್ ಲೋಕಲ್ ಸಂಸ್ಥೆಯ ಸಹ-ಸಂಸ್ಥಾಪಕ ಅಂಕಿತ್ ಭಾರ್ಗವ ಮಾತನಾಡಿ, ನಗರದ ಪುರಾತನ ಸ್ಥಳಗಳ ಬಗ್ಗೆ ತಿಳಿಸುವ ಮೊದಲ ಹೆಜ್ಜೆಯಾಗಿದೆ. ಮೆಟ್ರೋ ಮಾರ್ಗವು ನಗರದ ಹಲವು ಐತಿಹಾಸಿಕ ಸ್ಥಳಗಳ ಬಳಿ ಹಾದು ಹೋಗುತ್ತದೆ. ಹೀಗಾಗಿ, ನಾವು ಈ ಐತಿಹಾಸಿಕ ಸ್ಥಳಗಳ ಬಗ್ಗೆ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ತಿಳಿಸುವ ನಿಟ್ಟಿನಲ್ಲಿ ಈ ಉಪಕ್ರಮ ಜಾರಿಗೆ ತರಲು ನಿರ್ಧರಿಸಿದೇವು. ಕೊರೊನಾ ಕಾರಣದಿಂದ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲು 4.5 ವರ್ಷ ಸಮಯ ತೆಗೆದುಕೊಂಡಿತು ಎಂದರು.
