ಬೆಂಗಳೂರು
ನಗರದಲ್ಲಿ ಕಳೆದ ಒಂದು ವಾರದಿಂದ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ಮಳೆ ಕೊಂಚ ವಿರಾಮ ನೀಡಿತ್ತು. ನಿನ್ನೆ ಸಂಜೆಯಿಂದ ಸ್ವಲ್ಪ ಬಿಡುವು ನೀಡಿದ್ದ ಮಳೆರಾಯ ಇಂದು ಸಂಜೆಯಾಗುತ್ತಿದ್ದಂತೆ ಮತ್ತೆ ಎಂಟ್ರಿಕೊಟ್ಟಿದ್ದಾರೆ. ಆ ಮೂಲಕ ಸಿಟಿ ಮಂದಿ ಮತ್ತೆ ಕಂಗಾಲಾಗಿದ್ದಾರೆ. ಹಲವೆಡೆ ಸುರಿಯುತ್ತಿರುವ ಭಾರೀ ಮಳೆಗೆ ಮಲ್ಲೇಶ್ವರಂನ ಹಳ್ಳಿ ಮನೆ ಮುಂದೆ ಬೃಹದಾಕಾರ ಮರ ಧರೆಗುರುಳಿದು ಅವಾಂತರ ಸೃಷ್ಟಿಯಾಗಿದೆ.
ವಿಧಾನಸೌಧ, ಕೆ.ಆರ್.ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಕಾರ್ಪೊರೇಷನ್ ಸರ್ಕಲ್ ಶಾಂತಿನಗರ ಮತ್ತು ರಿಚ್ಮಂಡ್ ಸರ್ಕಲ್, ಡಾಲರ್ಸ್ ಕಾಲೋನಿ, ಹೆಬ್ಬಾಳ, ಸಂಜಯ್ ನಗರ, ಬಿಇಎಲ್ ರೋಡ್, ಎಂಎಸ್ ರಾಮಯ್ಯ ಆಸ್ಪತ್ರೆ ಸೇರಿದಂತೆ ಹಲವೆಡೆ ಭಾರೀ ಮಳೆ ಆಗಿದೆ. ಕೆಂಗೀರಿ ಸುತ್ತಮುತ್ತ ಜಿಟಿ ಜಿಟಿ ಮಳೆ ಆರಂಭವಾಗಿದ್ದರೆ, ಜಯನಗರ 7ನೇ ಹಂತದಲ್ಲಿ ಸುಮಾರು 30 ನಿಮಿಷದಿಂದ ಜೋರು ಗಾಳಿ ಜೊತೆಗೆ ಧಾರಾಕಾರ ಮಳೆ ಸುರಿಯುತ್ತಿದೆ.
ಧಾರಾಕಾರ ಮಳೆಗೆ ಮ್ಯಾನ್ ಹೋಲ್ ಓಪನ್ ಆಗಿ ನೀರು ಉಕ್ಕಿ ಹರಿದಿದೆ. ಪರಿಣಾಮ ಶಾಂತಿನಗರದ ಬಿಟಿಎಸ್ ರಸ್ತೆ ಕೆಸರು ಮಯವಾಗಿದೆ. ನೀರು ತುಬಿಕೊಂಡ ಹಿನ್ನಲೆ ಗುಂಡಿಗಳು ಕಾಣದಂತಾಗಿದ್ದು, ಬೈಕ್ ಸವಾರರು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗುಂಡಿಯಲ್ಲಿ ಆಟೋ ರಿಕ್ಷಾಯೊಂದು ಸಿಲುಕಿಕೊಂಡಿದ್ದು, ಮುಂದಕ್ಕೆ ಹೋಗುವುದಕ್ಕೆ ಆಗದೇ ಪರದಾಡುವಂತಾಗಿದೆ. ರಸ್ತೆ ಗುಂಡಿ ನೋಡಿ ಬಿಬಿಎಂಪಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿ ರಸ್ತೆಯಲ್ಲಿ ಹೇಗೆ ಓಡಾಡೋದು. ನೋಡಿ ಸ್ವಲ್ಪ ಯಾಮರಿದರೂ ನಾನು ಬೀಳುತ್ತಿದ್ದೆ. ದಯವಿಟ್ಟು ಮೊದಲು ರಸ್ತೆ ಗುಂಡಿಗಳನ್ನು ಮುಚ್ಚಿ. ರಾಜಕಾಲುವೆಗೆ ಪೈಂಟ್ ಹೊಡೆದು ಹಣ ಹೊಡೆಯುತ್ತಿದ್ದಾರೆ. ಆದರೆ ರಾಜಕಾಲುವೆಯಲ್ಲಿ ಬರೀ ಕೊಳಚೆ ನೀರು ಹೋಗುತ್ತಿದೆ ಅಂತ ಆಕ್ರೋಶ ಹೊರಹಾಕಿದ್ದಾರೆ.