ದೌರ್ಜನ್ಯ ಪ್ರಕರಣಗಳಲ್ಲಿ ಎಫ್‍ಐಆರ್, ವಿಡಿಯೋ ರೆಕಾರ್ಡಿಂಗ್ ಕಡ್ಡಾಯ!

 ತುಮಕೂರು:

     ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡದವರು ಸೇರಿದಂತೆ ರಾಜ್ಯದಲ್ಲಿ ದೌರ್ಜನ್ಯ ಪ್ರತಿಬಂಧ ಅಧಿನಿಯಮದಡಿ ದಾಖಲಾಗುವ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಶೇ.5 ರಿಂದ 6ರಷ್ಟು ಮಾತ್ರ ಇದ್ದು, ಪ್ರಕರಣಗಳಲ್ಲಿ ಕಡ್ಡಾಯ ಎಫ್‍ಐಆರ್ ಮಾಡುವ ಜೊತೆಗೆ ದೂರು ನೀಡುವ ಸಂದರ್ಭದಲ್ಲಿ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಬೇಕೆಂಬುದು ರಾಜ್ಯ ಸರಕಾರ ಮಹತ್ವದ ಸೂಚನೆ ನೀಡಿದೆ.

      ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ದೌರ್ಜನ್ಯ ಪ್ರತಿಬಂಧ ಅಧಿನಿಯಮದ ಕುರಿತು ಏರ್ಪಡಿಸಿದ್ಧ ರಾಜ್ಯಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ನಡೆದ ಸಭೆಯಲ್ಲಿ ದೌರ್ಜನ್ಯ ಪ್ರತಿಬಂಧ ಅಧಿನಿಯಮವನ್ನು ಬಲಪಡಿಸಲು ಅಗತ್ಯ ಸೂಚನೆಗಳನ್ನು ನೀಡಿದ್ದು, ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಿಸಲು ವ್ಯಾಜ್ಯ ಮತ್ತು ಅಭಿಯೋಗ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಸಿಎಂ ನಿರ್ದೇಶಿಸಿದ್ದಾರೆ.

     60 ದಿನದೊಳಗೆ ತನಿಖೆ ಮುಗಿಸಿ ದೋಷಾರೋಪ ಪಟ್ಟಿ ಸಲ್ಲಿಸಬೇಕು: ಎಲ್ಲಾ ಪೊಲೀಸ್ ಅಧಿಕಾರಿಗಳು ದೌರ್ಜನ್ಯ ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಬೇಕು. ಮತ್ತು ಸಂಬಂಧಿಸಿದ ಸೆಕ್ಷನ್‍ಗಳನ್ನು ಅನುಮೋದಿಸಬೇಕು. ಪೊಲೀಸ್ ಅಧಿಕಾರಿಗಳು 60 ದಿನದೊಳಗೆ ತನಿಖೆ ಮುಗಿಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಬಗ್ಗೆ ಕ್ರಮ ವಹಿಸಿ ವಿಚಾರಣೆಯಲ್ಲಿ ಯಾವುದೇ ಲೋಪವಾಗದಂತೆ ಜಾಗರೂಕತೆ ವಹಿಸಬೇಕು. ಅಲ್ಲದೇ ಸಾಕ್ಷಿದಾರರು ಮತ್ತು ಸಂತ್ರಸ್ತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ತಾಕೀತು ಮಾಡಿದ್ದಾರೆ.

      ಪ್ರಸ್ತುತ ದೌರ್ಜನ್ಯ ಪ್ರತಿಬಂಧ ಅಧಿನಿಯಮದ ಅಡಿ ದಾಖಲಾಗುವ ಪ್ರಕರಣಗಳಲ್ಲಿ ಪಂಚನಾಮೆ ಮತ್ತು ಸಾಕ್ಷಿಗಳ ಹೇಳಿಕೆ ದಾಖಲಿಸುವ ಸಂದರ್ಭದಲ್ಲಿ ವಿಡಿಯೋ ರೆಕಾರ್ಡಿಂಗ್ ನಡೆಸಲಾಗುತ್ತಿದೆ. ದೂರು ಸಲ್ಲಿಸಲು ಬಂದ ಸಂತ್ರಸ್ತರ ಹಾದಿ ತಪ್ಪಿಸುವ ಸಾಧ್ಯತೆಗಳನ್ನು ತಪ್ಪಿಸಲು ದೂರು ನೀಡುವ ಸಂದರ್ಭದಲ್ಲಿ ವಿಡಿಯೋ ರೆಕಾರ್ಡಿಂಗ್ ನಡೆಸುವಂತೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡುವಂತೆ ಮುಖ್ಯಮಂತ್ರಿಗಳು ಗೃಹ ಇಲಾಖೆಗೆ ನಿರ್ದೇಶಿಸಿದರು.

      ಕಾಲೋನಿಗಳಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಕ್ರಮ:

      ಪರಿಶಿಷ್ಟ ಜಾತಿ/ಪಂಗಡಗಳ ಕಾಲೋನಿಗಳಲ್ಲಿ ತಂಡಗಳಲ್ಲಿ ಕನಿಷ್ಠ 100 ಪಡಿತರದಾರರು ಇದ್ದರೆ ನ್ಯಾಯಬೆಲೆ ಅಂಗಡಿಗಳನ್ನು ಸ್ಥಾಪಿಸುವ ಕುರಿತು ಕ್ರಮ ವಹಿಸಬೇಕು ಎಂದು ಸೂಚಿಸಿದ ಸಿಎಂ ಬಿಎಸ್‍ವೈ ದೌರ್ಜನ್ಯಕ್ಕೆ ಒಳಪಟ್ಟ ಸಂತ್ರಸ್ತರಿಗೆ ನಿಯಮಾನುಸಾರ ಪರಿಹಾರ ಧನ ನೀಡಲಾಗುತ್ತಿದೆ. ಪ್ರಸ್ತುತ ಸಾಲಿನಲ್ಲಿ 30 ಕೋಟಿ ಅನುದಾನ ಪರಿಹಾರಕ್ಕೆಂದೇ ಮೀಸಲಿರಿಸಿದ್ದು ಈ ಪೈಕಿ 15 ಕೋಟಿ ಡಿಸಿಗಳಿಗೆ ಬಿಡುಗಡೆ ಮಾಡಲಾಗಿದೆ. ದೌರ್ಜನ್ಯಕ್ಕೆ ಒಳಗಾದವರಿಗೆ ನಿಗದಿತ ಸಮಯದೊಳಗೆ ಪರಿಹಾರ ನೀಡಲು ಡಿಸಿ ಕ್ರಮವಹಿಸಬೇಕು. ಜೊತೆಗೆ ಕೇಂದ್ರ ಸರಕಾರದ ಅಂಬೇಡ್ಕರ್ ಫೌಂಡೇಶನ್ ವತಿಯಿಂದ ನೀಡಲಾಗುವ ಪರಿಹಾರ ಒದಗಿಸಲು ಕ್ರಮವಹಿಸಬೇಕು ಎಂದು ಸಿಎಂ ಸೂಚಿಸಿದ್ದಾರೆ. ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‍ಭಾಸ್ಕರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಇನ್ನಿತರರು ಹಾಜರಿದ್ದರು.
 
      3 ತಿಂಗಳಿಗೊಮ್ಮೆ ಜಿಲ್ಲಾ ಜಾಗೃತ ಸಮಿತಿ ಕಡ್ಡಾಯ: ಸಂತ್ರಸ್ತರಿಗೆ ಉದ್ಯೋಗ ನೀಡುವ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ತಿರಸ್ಕರಿಸದಿರುವಂತೆ ಅಧಿಕಾರಿಗಳಿಗೆ ಸೂಚಿಸಿರುವ ಮುಖ್ಯಮಂತ್ರಿಗಳು ಜಿಲ್ಲಾ ಮತ್ತು ಉಪವಿಭಾಗ ಮಟ್ಟದಲ್ಲಿ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಗಳನ್ನು ಪ್ರತೀ ಮೂರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರು ಕಡ್ಡಾಯವಾಗಿ ನಡೆಸಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸುವಂತೆಯೂ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap