ಬೆಂಗಳೂರು:
ಬೆಂಗಳೂರಿನಲ್ಲಿ ವರಣಾರ್ಭಟ ಮುಂದುವರೆದಿದ್ದು, ಕೇವಲ 24 ಗಂಟೆಗಳಲ್ಲಿ ಬರೊಬ್ಬರಿ 103 ಮಿ.ಮೀ ಮಳೆಯಾಗಿದ್ದು, ಮಳೆಯ ರೌದ್ರಾವತಾರದಿಂದ ಬರೊಬ್ಬರಿ 10 ಕಿ.ಮೀ ವರೆಗೂ ಟ್ರಾಫಿಕ್ ಜಾಮ್ ಉಂಟಾಗಿರುವ ಘಟನೆ ನಡೆದಿದೆ.ಸೋಮವಾರ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರು ನಗರದ ಹಲವು ಭಾಗಗಳು ಜಲಾವೃತ್ತವಾಗಿದ್ದು, ರಸ್ತೆಗಳಲ್ಲಿ ನೀರು ನಿಂತು ಸವಾರರು ಪರದಾಡಿದರು. ಜನ ವಸತಿ ಪ್ರದೇಶಗಳು ಜಲಾವೃತಗೊಂಡಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಹವಾಮಾನ ಇಲಾಖೆ ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 103 ಮಿಮೀ ಮಳೆಯಾಗಿದೆ. ಮುಂಬರುವ ದಿನಗಳಲ್ಲಿ ನಗರದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ನಗರದ ಹವ್ಯಾಸಿ ಹವಾಮಾನ ವೀಕ್ಷಕರ ಪ್ರಕಾರ, ಬೆಂಗಳೂರಿನಲ್ಲಿ ಈ ಪೂರ್ವ ಮಾನ್ಸೂನ್ ಋತುವಿನಲ್ಲಿ, ಕಳೆದ ಎರಡು ದಿನಗಳಿಂದ 15 ರಿಂದ 20 ಸೆಂ.ಮೀ. ಮಳೆಯಾಗುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಭಾರಿ ಮಳೆಯಾಗಿದ್ದು, ಕೆಂಗೇರಿಯಲ್ಲಿ 132 ಮಿಮೀ, ಕೋರಮಂಗಲದಲ್ಲಿ 96.5 ಮಿಮೀ ಮತ್ತು ಎಚ್‌ಎಎಲ್‌ನಲ್ಲಿ 93 ಮಿಮೀ ಮಳೆಯಾಗಿದ್ದು, ವ್ಯಾಪಕ ಪ್ರವಾಹ ಉಂಟಾಗಿದೆ. ಗುರುವಾರದವರೆಗೆ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗೃಹ ಸಚಿವ ಜಿ ಪರಮೇಶ್ವರ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ‘ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದೆ. ಮುಂಗಾರು ಪೂರ್ವದಲ್ಲಿ, ನಾವು ಸಾಮಾನ್ಯವಾಗಿ ಪ್ರವಾಹ ನೋಡುತ್ತೇವೆ. ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ನೀರು ನಿಂತಿರುವುದನ್ನು ಮತ್ತು ರಸ್ತೆಗಳಿಂದ ಉರುಳಿದ ಮರಗಳು ಮತ್ತು ಕೊಂಬೆಗಳನ್ನು ತೆರವುಗೊಳಿಸುವ ಕೆಲಸದಲ್ಲಿದೆ. ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ’ ಎಂದು ಹೇಳಿದರು.
ಬೆಂಗಳೂರಿನಲ್ಲಿ ಇದುವರೆಗೆ ಮಳೆಯಿಂದ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಮಹದೇವಪುರ ವಲಯದಲ್ಲಿ ಬರುವ ಹೊರಮಾವುವಿನ ಸಾಯಿ ಲೇಔಟ್ ಒಂದಾಗಿದೆ. ಇದಕ್ಕೂ ಮೊದಲು, ಮಾನ್ಸೂನ್ ಪೂರ್ವ ಮಳೆಯು ಲೇಔಟ್ ಅನ್ನು 4-5 ಅಡಿ ನೀರಿನಿಂದ ಮುಳುಗಿಸಿ, ಬೀದಿಗಳು ಮೊಣಕಾಲು ಮಟ್ಟದವರೆಗೆ ಜಲಾವೃತಗೊಂಡಿತ್ತು.
ಬೆಂಗಳೂರಿನಲ್ಲಿ ಸುರಿದ ದಾಖಲೆಯ ಮಳೆಯಿಂದಾಗಿ ಬೆಂಗಳೂರಿನಲ್ಲಿ ಭಾರಿ ಉದ್ದದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಗೆ ಕುಖ್ಯಾತಿ ಪಡೆದಿರುವ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ನಿನ್ನೆ ರಾತ್ರಿ ಮಳೆಯಿಂದಾಗಿ ಬರೊಬ್ಬರಿ 10ಕಿಮೀವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು ಎನ್ನಲಾಗಿದೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗುತ್ತಿವೆ.
ಭಾರಿ ಮಳೆಯಿಂದಾಗಿ ಒಳಚರಂಡಿಗಳು ಭರ್ತಿಯಾಗಿ ನೀರು ರಸ್ತೆ ಮೇಲೆ ಹರಿದಿದ್ದರಿಂದ ವಾಹನ ಸವಾರರು ಪರದಾಡಿದರು. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸವಾರರು, ಮುಚ್ಚಿಹೋಗಿರುವ ಚರಂಡಿಗಳೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ ಮತ್ತು ಅಧಿಕಾರಿಗಳಿಗೆ ಪದೇ ಪದೇ ದೂರು ನೀಡಿದರೂ ಅವುಗಳನ್ನು ಸ್ವಚ್ಛಗೊಳಿಸಿಲ್ಲ ಎಂದು ಆರೋಪಿಸಿದ್ದಾರೆ.
