ಬೆಂಗಳೂರು :
ಫುಟ್ ಪಾತ್ ಮೇಲಿನ ಕಂಬಕ್ಕೆ ಕಾರು ಡಿಕ್ಕಿಯಾಗಿ ಏಳು ಮಂದಿ ಸಾವನ್ನಪ್ಪಿರುವ ಘಟನೆ ಕೋರಮಂಗಲದ ಮಂಗಳ ಕಲ್ಯಾಣಮಂಟಪದ ಬಳಿ ನಡೆದಿದೆ.
ಕರುಣಾಸಾಗರ , ಬಿಂದು , ಇಶಿತಾ , ಡಾ.ಧನುಶಾ , ಅಕ್ಷಯ್ ಗೋಯಲ್, ಉತ್ಸವ್, ರೋಹಿತ್ ಮೃತ ದುರ್ದೈವಿಗಳು.
ನಿನ್ನೆ ತಡ ರಾತ್ರಿ 1:30ರ ಸುಮಾರಿಗೆ ಮಂಗಳ ಕಲ್ಯಾಣಮಂಟಪದ ಬಳಿ ವೇಗವಾಗಿ ಬಂದ ಆಡಿ ಕ್ಯೂ 3 ಕಾರು ಫುಟ್ ಪಾತ್ ಮೇಲಿನ ಕಂಬಕ್ಕೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರ ಗಾಯಗೊಂಡಿದ್ದ ಓರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಡಿಎಂಕೆ ಶಾಸಕನ ಪುತ್ರನ ಸಾವು :
ಈ ಅಪಘಾತದಲ್ಲಿ ತಮಿಳುನಾಡಿನ ಹೊಸೂರು ಕ್ಷೇತ್ರದ ಶಾಸಕರ ಮಗನೂ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಹೊಸೂರು ಕ್ಷೇತ್ರದ ಶಾಸಕ Y. ಪ್ರಕಾಶ್ ಅವರ ಮಗ ಕರುಣಾ ಸಾಗರ್ ಕೂಡ ಈ ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಅಪಘಾತಕ್ಕೆ ಬಲಿಯಾಗಿದ್ದಾನೆ. ವಿಷಯ ತಿಳಿದ ಹೊಸೂರು ಶಾಸಕರ ಬೆಂಬಲಿಗರು ಹಾಗೂ ಕುಟುಂಬ ಸದಸ್ಯರು ಸೇಂಟ್ ಜಾನ್ಸ್ ಆಸ್ಪತ್ರೆಗೆ ಆಗಮಿಸಿದ್ದಾರೆ. ಶಾಸಕರಿಗೆ ಇದ್ದದ್ದು ಒಬ್ಬನೇ ಮಗ ಎನ್ನಲಾಗಿದೆ.
ಇಂಗ್ಲೆಂಡ್‌ನಲ್ಲಿ ವ್ಯಾಸಂಗ ಮಾಡಿದ್ದ ಕರುಣಾ ಸಾಗರ್ ಐದು ವರ್ಷದ ಹಿಂದೆ ಮರಳಿ ಭಾರತಕ್ಕೆ ಬಂದಿದ್ದ. ಇಲ್ಲಿ ಪ್ಯಾಕೇಜಿಂಗ್ ಇಂಡಸ್ಟ್ರಿ ಮಾಡಿಕೊಟ್ಟಿದ್ದರು. ಹೊಸೂರು ಸಮೀಪದ ಬ್ಯಾಳಗೊಂಡನಹಳ್ಳಿಯಲ್ಲಿ ಕರುಣಾ ಸಾಗರ್ ಕಂಪನಿ ನಡೆಸುತ್ತಿದ್ದ. ಹೊಸೂರು ಕ್ಷೇತ್ರದ ಶಾಸಕ ಪ್ರಕಾಶ್ ಅವರ ಪುತ್ರ ಕರುಣಾ ಸಾಗರ್ ಬಿಂದು ಎಂಬುವರನ್ನು ಪ್ರೀತಿ ಮಾಡುತ್ತಿದ್ದ. ಈ ವಿಚಾರವನ್ನು ಮನೆಯಲ್ಲಿ ತಿಳಿಸಿದ್ದ. ಇಬ್ಬರ ಮದುವೆ ಮಾಡಲು ಕುಟುಂಬಸ್ಥರು ನಿಶ್ಚಯಿಸಿದ್ದರು.
ಕಟ್ಟಡ ಸಾಮಾಗ್ರಿ ಖರೀದಿಸುವ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಕರುಣಾ ಸಾಗರ್ ತನ್ನ ಗೆಳತಿ ವಾಸವಾಗಿದ್ದ ಪಿಜಿಗೆ ಹೋಗಿ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ. ತನ್ನ ಸ್ನೇಹಿತೆಯರ ಜತೆ ಬಿಂದು ಕೂಡ ಬಂದಿದ್ದಾರೆ. ಸ್ನೇಹಿತರ ಜತೆಗೂಡಿ ರಾತ್ರಿ ಹೊರ ಹೋಗಿದ್ದಾರೆ. ಪಾರ್ಟಿ ಮಾಡಿದ ಬಳಿಕ ವಾಪಸು ಕೋರಮಂಗಲಕ್ಕೆ ಬರುವಾಗ ಈ ಅವಘಡ ಸಂಭವಿಸಿದೆ. ಕರುಣಾಸಾಗರ್ ಮತ್ತು ಬಿಂದು ಸಪ್ತ ಪದಿ ತುಳಿಯುವ ಮೊದಲೇ ಸಾವನ್ನಪ್ಪಿದ್ದಾರೆ.
ಸ್ಥಳ ಪರಿಶೀಲನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಅತಿ ವೇಗ ಮತ್ತು ಚಾಲಕನ ಅಜಾಗರೂಕತೆಯೇ ಈ ಭೀಕರ ಅಪಘಾತಕ್ಕೆ ಕಾರಣ, ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಿದ್ದರೆ ಈ ಅಪಘಾತವಾಗುತ್ತಿರಲಿಲ್ಲ. ಈ ಕಾರಿನಲ್ಲಿ 5 ಮಂದಿ ಆರಾಮವಾಗಿ ಕುಳಿತುಕೊಳ್ಳಬಹುದು. ಆದರೆ, 7 ಮಂದಿ ಕುಳಿತಿದ್ದರು. ಯಾರೊಬ್ಬರೂ ಸೀಟ್‍ಬೆಲ್ಟ್ ಹಾಕಿರಲಿಲ್ಲ. ಸೀಟ್‍ಬೆಲ್ಟ್ ಹಾಕಿದ್ದರೆ ಬದುಕುತ್ತಿದ್ದರು ಎಂದು ವಿವರಿಸಿದರು. ಎಂದು ತಿಳಿಸಿದ್ದಾರೆ.
ಈ ಸಂಬಂಧ ಆಡುಗೋಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ