ಬೆಡ್ ಬ್ಲಾಕಿಂಗ್ ದಂಧೆ ; ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾದ ಪ್ರಕರಣ

ಬೆಂಗಳೂರು: 

     ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕಿಂಗ್ ದಂಧೆ ನಡೆದಿರುವುದು, ಅದನ್ನು ಖಾಸಗಿ ವಾಹಿನಿಯ ಮೂಲಕ ಸಂಸದ ತೇಜಸ್ವಿ ಸೂರ್ಯ ಬಹಿರಂಗಪಡಿಸಿ ಆನಂತರ ಸಂಜೆ ಸ್ವತಃ ತಾನೇ ಪತ್ರಿಕಾಗೋಷ್ಠಿ ನಡೆಸಿ ಕರಾಳ ದಂಧೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪ್ರಸಂಗ ಇದೀಗ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ತರಾವರಿ ಚರ್ಚೆಗೆ ಗ್ರಾಸ ಒದಗಿಸಿದೆ. ಫೇಸ್‍ಬುಕ್, ವಾಟ್ಸ್‍ಪ್, ಟ್ವಿಟರ್‍ಗಳಲ್ಲಿ ಬೆಳಗಿನಿಂದ ತರಹೆವಾರಿ ಸಂದೇಶಗಳು, ಕಾಮೆಂಟ್ಸ್‍ಗಳು ಹರಿದಾಡುತ್ತಿವೆ.

     ಸಂಸದ ತೇಜಸ್ವಿ ಸೂರ್ಯ ಆಡಳಿತ ಪಕ್ಷದ ಒಂದು ಭಾಗ. ಅಕ್ರಮ ಮತ್ತು ಅನ್ಯಾಯಗಳನ್ನು ತಡೆಯಲು ಎಲ್ಲಿಯೂ ಹೋಗಬೇಕಿಲ್ಲ. ಒಂದು ದೂರವಾಣಿ ಕರೆ ಮಾಡಿದರೆ ಸಾಕು. ಹೀಗಿರುವಾಗ ಈ ಅಕ್ರಮವನ್ನು ಬಯಲಿಗೆಳೆಯಲು ನಾಲ್ಕುದಿನ ತೆಗೆದುಕೊಂಡರು. ರಾತ್ರೋರಾತ್ರಿ ಹೋರಾಡಿದರು ಎಂಬೆಲ್ಲಾ ಹೇಳಿಕೆಗಳನ್ನು ನೋಡಿದರೆ ಇವರೇನು ಮಾಧ್ಯಮ ಪ್ರತಿನಿಧಿಯೋ ಅಥವಾ ವಿರೋಧ ಪಕ್ಷದ ನಾಯಕರೋ ಎಂಬಂತಹ ಕಾಮೆಂಟ್ಸ್‍ಗಳು ಹರಿದಾಡುತ್ತಿವೆ.

ಪತ್ರಿಕಾಗೋಷ್ಠಿ ನಡೆಸಿ ಅನ್ಯಾಯದ ಬಗ್ಗೆ ಮಾತನಾಡಿದ್ದಾರೆ. ಈ ಅಕ್ರಮ ಸಹಿಸಲ್ಲ ಎಂದಿದ್ದಾರೆ. ಆದರೆ ನಾಲ್ಕು ದಿನಗಳ ಕಾಲ ತನಿಖೆ ನಡೆಸಿ ಪತ್ರಿಕಾಗೋಷ್ಠಿ ನಡೆಸಿ ವೀರಾವೇಶದ ಮಾತುಗಳನ್ನಾಡುವ ಮುಂಚೆ ಅಕ್ರಮ ಎಸಗಿದವರ ಮೇಲೆ ದೂರು ಏಕೆ ನೀಡಲಿಲ್ಲ? ಅಂತಹವರನ್ನು ಜೈಲಿಗೆ ಯಾಕೆ ಕಳಿಸಲಿಲ್ಲ ಎಂಬ ಆರೋಪಗಳು ಈಗ ಕೇಳಿಬರತೊಡಗಿವೆ. ಪತ್ರಿಕಾಗೋಷ್ಠಿ ಮಾಡುವವರು ವಿರೋಧ ಪಕ್ಷಗಳವರು. ಆದರೆ ಪಕ್ಷದ ಒಳಗಿದ್ದುಕೊಂಡೇ ಪತ್ರಿಕಾಗೋಷ್ಠಿ ಮಾಡುತ್ತಾರೆಂದರೆ ಇದರ ಹಿಂದಿನ ಮರ್ಮವೇನು? ಅಂದರೆ, ಯಡಿಯೂರಪ್ಪ ನಾಯಕತ್ವದ ವಿರುದ್ಧ ಇವರು ಹೋರಾಡುತ್ತಿದ್ದಾರೆಯೇ? ಬಿಜೆಪಿ ಆಡಳಿತ ಸರಿಯಿಲ್ಲ ಎನ್ನುತ್ತಿದ್ದಾರೆಯೇ..? ಹಾಗಾದರೆ ಪತ್ರಿಕಾಗೋಷ್ಠಿ ಮೂಲಕ ವೀರಾವೇಷ ಪ್ರದರ್ಶಿಸಿದ್ದು ಯಾವ ಕಾರಣಕ್ಕೆ ಎನ್ನುವ ಚರ್ಚೆಗಳು ಹೆಚ್ಚು ಹೆಚ್ಚಾಗಿ ಹರಿದಾಡುತ್ತಿವೆ. ಚಾಮರಾಜನಗರ ಘಟನೆಯನ್ನು ಮರೆಮಾಚಲು ಜನರ ಚಿತ್ತವನ್ನು ಇತ್ತ ಸೆಳೆದರೆ ಅಥವಾ ತನ್ನ ವೈಯಕ್ತಿಕ ಇಮೇಜ್ ಹೆಚ್ಚಿಸಿಕೊಳ್ಳಲು ಮಾಧ್ಯಮದ ಮುಂದೆ ಬಂದರೆ ಎಂಬಂತಹ ಆರೋಪಗಳು ಹೆಚ್ಚು ಹೆಚ್ಚಾಗಿ ಕೇಳಿಬರುತ್ತಿದ್ದು, ಪರ-ವಿರೋಧದ ಚರ್ಚೆಗಳಿಗೆ ಕಾರಣವಾಗಿದೆ. ತೇಜಸ್ವಿ ಸೂರ್ಯ ಅವರ ಕ್ರಮವನ್ನು ಬೆಂಬಲಿಸಿ ಹಲವರು ಪ್ರಶಂಸೆಯ ನುಡಿಗಳನ್ನೂ ಆಡುತ್ತಿದ್ದಾರೆ.

ಕಠಿಣ ಕ್ರಮಕ್ಕೆ ಆಗ್ರಹ

     ಕೊರೋನಾ ಸೋಂಕಿತರ ಹೆಸರಿನಲ್ಲಿ ಹಾಸಿಗೆ ಬ್ಲಾಕ್ ಮಾಡಿಸಿ ದುಬಾರಿ ಬೆಲೆಗೆ ಬೇರೊಬ್ಬರಿಗೆ ಮಾರಾಟ ಮಾಡುತ್ತಿದ್ದ ದಂಧೆಯನ್ನು ಸಂಸದ ತೇಜಸ್ವಿ ಸೂರ್ಯ ಹಾಗೂ ಸರ್ಕಾರದ ಶಾಸಕರು ಬಯಲು ಮಾಡಿದ್ದು, ತಪ್ಪಿತ್ತಸ್ಥರ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಸಂಸದ ತೇಜಸ್ವಿ ಅವರು ಸಿಎಂ ಯಡಿಯೂರಪ್ಪ ಹಾಗೂ ಸಚಿವರ ವಿರುದ್ಧ ಭ್ರಷ್ಟಾಚಾರ ಹಾಗೂ ಪರೋಕ್ಷ ಹತ್ಯೆ ಆರೋಪ ಮಾಡಿದ್ದಾರೆ, ಎಂತಹ ನಾಟಕ ಎಂದು ಕುಹಕವಾಡಿದೆ.

      ಸಂಸದ ತೇಜಸ್ವಿ ಸೂರ್ಯ ಮತ್ತು ಅವರ ಸಂಬಂಧಿ ಶಾಸಕ ಮತ್ತು ಮತ್ತಿಬ್ಬರು ಶಾಸಕರು ಆಸ್ಪತ್ರೆಯಲ್ಲಿ ಹಾಸಿಗೆ ಹಗರಣದ ಬಗ್ಗೆ ಆರೋಪಿಸಿದ್ದಾರೆ. ರಾಜ್ಯದಲ್ಲೂ, ಕೇಂದ್ರದಲ್ಲೂ , ಬಿಬಿಎಂಪಿಯಲ್ಲೂ ಬಹುತೇಕ ಬೆಂಗಳೂರು ಎಂಪಿಗಳೂ ಎಲ್ಲರೂ ಬಿಜೆಪಿಯವರೇ! ಒಬ್ಬರಲ್ಲ ಎಂದು ಮೂರು ಡಿಸಿಎಂಗಳು. ಅಧಿಕಾರವೆಲ್ಲ ತಮ್ಮ ಕೈಲಿದ್ದು ಸಹ ಬಿಜೆಪಿಯ ಎಂಪಿಗಳು, ಶಾಸಕರು ಪ್ರೆಸ್ ಮೀಟ್ ಮಾಡಿ ತಮ್ಮದೇ ಸರ್ಕಾರದ ವೈಫಲ್ಯತೆ, ಭ್ರಷ್ಟಾಚಾರವನ್ನು ಹೇಳುತ್ತಿದ್ದಾರೆ ಎಂದರೆ ಇದು ತೀರ ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದೆ.
ಸಂಸದ- ಶಾಸಕರ ಪತ್ರಿಕಾಗೋಷ್ಠಿ ಅಧಿಕಾರಿಗಳ ಮೇಲೆ ಆರೋಪ ಹೊರಿಸಿ ಹೊಣೆಗಾರಿಕೆಯಿಂದ ಜಾರಿಕೊಳ್ಳುವ ಯತ್ನ ಹಾಗೂ ಬಿಜೆಪಿ ಒಳಜಗಳದ ಭಾಗವಷ್ಟೇ. ಬೆಡ್‍ಗಳ ಅವ್ಯವಹಾರ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದೇಕೆ? ಪತ್ರಿಕಾಗೋಷ್ಠಿ ಬದಲು ಲೋಪ ಸರಿಪಡಿಸುವ ಪ್ರಯತ್ನ ಮಾಡಿಲ್ಲ ಏಕೆ? ಇಂತಹ ದುರಿತ ಕಾಲದಲ್ಲೂ ಗಾಂಭೀರ್ಯತೆ ಇಲ್ಲವೇಕೆ? ಎಂದು ಪ್ರಶ್ನಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap