ಕೋಲಾರ
ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್ ಹೈವೇಯಲ್ಲಿ ಕೋಲಾರದ ಸಮೀಪ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಮಾಲೂರು ತಾಲೂಕಿನ ಅಬ್ಬೇನಹಳ್ಫಿ ಬಳಿ ಕಾರು ರಸ್ತೆ ಡಿವೈಡರ್ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರು ಮೇಲಿಂದ ಕೆಳಗೆ ಬಿದ್ದಿದ್ದು, ಸಂಪೂರ್ಣ ಜಖಂಗೊಂಡಿದೆ.
ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್ ಹೈವೆಯಲ್ಲಿ ಮಧ್ಯರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದ ತೀವ್ರತೆ ನೋಡಿ ಜನರು ಬೆಚ್ಚಿಬಿದ್ದಿದ್ದಾರೆ. ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು ಬಳಿಕ ಬ್ರಿಡ್ಜ್ನಿಂದ ಕೆಳಗೆ ಚಿಮ್ಮಿ ಬಿದ್ದಿದೆ. ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ನಾಲ್ವರು ಮೃತಪಟ್ಟಿದ್ದಾರೆ. ಗೋಪಿ (38), ಗೌತಮ್ ರಮೇಶ್ (28), ಹರಿಹರನ್ (27), ಜಯಂಕರ್ (30) ಮೃತ ಯುವಕರಾಗಿದ್ದಾರೆ. ಅಪಘಾತದ ಬಳಿಕ ನಾಲ್ವರನ್ನು ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾಲ್ವರು ಕೊನೆಯುಸಿರೆಳೆದಿದ್ದಾರೆ.
ಮೃತರೆಲ್ಲರೂ ಚೆನ್ನೈ ಮೂಲದವರಾಗಿದ್ದಾರೆ. ತಮಿಳುನಾಡಿನಿಂದ ಬೆಂಗಳೂರಿನ ಕಡೆ ಬರುವಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಈ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.








