ಬೆಂಗಳೂರು :
ಸೋಮವಾರ ಸುರಿದ ಮಳೆಯಿಂದಾಗಿ ನಗರದ ಹಲವು ರಸ್ತೆಗಳು ಜಲಾವೃತವಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಅದರಲ್ಲೂ ಸಾಧಾರಣ ಮಳೆಗೆ ಬೆಂಗಳೂರಿನ ಸ್ಥಿತಿ ಹೀಗಾದರೇ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಎನ್ನುವ ಆತಂಕ ಈಗಾಗಲೇ ಶುರುವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಲವು ಮಂದಿ ವಾಹನಗಳಲ್ಲಿ ನೀರು ನಿಂತಿರುವ, ಹರಿಯುತ್ತಿರುವ ಫೋಟೊ, ವಿಡಿಯೋಗಳನ್ನು ಹಂಚಿಕೊಂಡಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಎದುರಾಗಿದೆ.
ಗೊಟ್ಟಿಗೆರೆಯ ಗುಂಡಪ್ಪ ಲೇಔಟ್‌ನಲ್ಲಿ ಮನೆಯ ಒಳಗೆ ನೀರು ನುಗ್ಗಿದೆ ಎಂದು ನಾಗರೀಕರು ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಚರಂಡಿಯಲ್ಲಿ ಸರಿಯಾಗಿ ನೀರು ಹರಿಯದ ಪರಿಣಾಮ ಮನೆಗಳಿಗೆ ನೀರು ನುಗ್ಗಿದ್ದು ನಿವಾಸಿಗಳು ಪರದಾಡುವಂತಾಗಿದೆ.
ನಗರದ ಬಸವನಗುಡಿಯ ಆರ್ ವಿ ರಸ್ತೆಯ ವಿಜಯ ಕಾಲೇಜಿನ ಮುಂಭಾಗದ ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಕಳೆದ ವರ್ಷವೇ ರಾಜಧಾನಿಯಲ್ಲಿ ಮಳೆಯಿಂದಾಗಿ ಭಾರಿ ಅನಾಹುತಗಳು ಸಂಭವಿಸಿದ್ದವು. ಹಲವು ರಸ್ತೆಗಳು, ಪ್ರದೇಶಗಳಿಗೆ ನೀರು ನುಗ್ಗಿ ಪ್ರವಾಹದ ಪರಿಸ್ಥಿತಿ ಉಂಟಾಗಿತ್ತು.
ಇಲ್ಲಿದೆ ಸಂಪೂರ್ಣ ವಿವರ ರಿಂಗ್‌ರಸ್ತೆಯಲ್ಲಿ ಜೋರು ಮಳೆಯಿಂದಾಗಿ ಮನೆಯೊಂದು ಕುಸಿದು ಬಿದ್ದಿದೆ. ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಅಪಾರ್ಟ್‌ಮೆಂಟ್‌ನ ತಡೆಗೋಡೆ ಸಮೇತ ಮನೆ ಕುಸಿದುಬಿದ್ದಿದ್ದು, ಎರಡು ಕಾರುಗಳು ಸಂಪೂರ್ಣವಾಗಿ ಜಖಂಗೊಂಡಿದ್ದು, ಇನ್ನು ಎರಡು ಕಾರುಗಳಿಗೆ ಹಾನಿಯಾಗಿದೆ.
ಬೆಂಗಳೂರಿನಲ್ಲಿ ಇನ್ನೂ ನಾಲ್ಕು ಐದು ದಿನಗಳು ಗುಡುಗು ಸಹಿತ ಭಾರಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಬೆಂಗಳೂರಿಗೆ ಮತ್ತೆ ಮುಳುಗಡೆ ಭೀತಿ ಎದುರಾಗಿದೆ. ಇನ್ನೆಷ್ಟು ಬಾರಿ ಮುಳುಗಿದ ಮೇಲೆ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ ಎಂದು ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ