ಬಿಜೆಪಿಯಿಂದ ಕಾದು ನೋಡುವ ತಂತ್ರ

ಬೆಂಗಳೂರು

      ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸಿ ಶಾಸಕರನ್ನು ಮುಂಬೈನ ರೆಸಾರ್ಟ್‍ಗೆ ಕರೆದೊಯ್ಯಲು ಸಿದ್ದತೆ ನಡೆಸಿದೆ ಎಂಬ ಸುದ್ದಿಗಳು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವಾಗಲೇ ಬಿಜೆಪಿ ತನ್ನ ಕಾರ್ಯತಂತ್ರವನ್ನು ದಿಢೀರೆಂದು ಬದಲಿಸಿದ್ದು, ಸದ್ಯಕ್ಕೆ ಶಾಸಕರನ್ನು ಮುಂಬೈಗೆ ಕರೆದೊಯ್ಯುವುದನ್ನು ಮುಂದೂಡಿದೆ. ಜತೆಗೆ ರಾಜಕೀಯ ಬೆಳವಣಿಗೆಗಳನ್ನು ಕಾದು ನೋಡುವ ತಂತ್ರಕ್ಕೆ ಶರಣಾಗಿದೆ.

      ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್‍ನ 16 ಶಾಸಕರನ್ನು ಮುಂಬೈಗೆ ಕರೆದೊಯ್ದು ಅವರಿಂದ ರಾಜೀನಾಮೆ ಕೊಡಿಸಿ ಸರ್ಕಾರವನ್ನು ಅಲ್ಪಮತಕ್ಕೆ ಕುಸಿಯುವಂತೆ ಮಾಡುವ ತಂತ್ರವನ್ನು ಬಿಜೆಪಿ ಹೆಣೆದಿತ್ತು. ಬಿಜೆಪಿಯ ಉರುಳಿಸಲಿರುವ ರಾಜಕೀಯ ದಾಳದ ಗುಟ್ಟು ರಟ್ಟಾಗುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಮಿಂಚಿನ ಬೆಳವಣಿಗೆಗಳು ನಡೆದು ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್ ನಾಯಕರುಗಳು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

       ಜತೆಗೆ ನಿನ್ನೆ ಸಂಜೆ ನಡೆದ ಸಚಿವ ಸಂಪುಟದಲ್ಲೂ ಸಹ ಸುದೀರ್ಘವಾಗಿ ಬಿಜೆಪಿಯ ರಾಜಕೀಯ ನಡೆ ಬಗ್ಗೆ ಚರ್ಚೆ ನಡೆದು ಅದಕ್ಕೆ ಪ್ರತಿತಂತ್ರ ರೂಪಿಸಲು ಸಾಕಷ್ಟು ಸಮಾಲೋಚನೆಗಳು ನಡೆದಿದ್ದವು. ಈ ಎಲ್ಲಾ ಬೆಳವಣಿಗೆಗಳಿಂದ ಸ್ವಲ್ಪಮಟ್ಟಿಗೆ ವಿಚಲಿತಗೊಂಡಿರುವ ಬಿಜೆಪಿ ನಾಯಕರುಗಳು ಸದ್ಯಕ್ಕೆ ರೆಸಾರ್ಟ್ ರಾಜಕೀಯಕ್ಕೆ ತಾತ್ಕಾಲಿಕ ವಿರಾಮ ಹಾಡಿದ್ದು, ರಾಜಕೀಯ ಬೆಳವಣಿಗೆಗಳನ್ನು ಕಾದುನೋಡಿ ಮುಂದಿನ ರಾಜಕೀಯ ದಾಳ ಉರುಳಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.

        ಕಾಂಗ್ರೆಸ್ ಹಾಗೂ ಜೆಡಿಎಸ್‍ನ 15-16 ಶಾಸಕರನ್ನು ಇಂದು ಗುಟ್ಟಾಗಿ ಮುಂಬೈನ ರೆಸಾರ್ಟ್‍ಗೆ ಕರೆದೊಯ್ಯಲು ನಿನ್ನೆಯಿಂದಲೇ ಬಿಜೆಪಿ ಪಾಳಯದಲ್ಲಿ ಸಿದ್ದತೆ ನಡೆದಿತ್ತು. ಮುಂಬೈನಲ್ಲಿ ಶಾಸಕರ ವಾಸ್ತವ್ಯಕ್ಕಾಗಿ ಮಹಾರಾಷ್ಟ್ರದ ಸಚಿವ ಕೊಲ್ಲಾಪುರದ ಚಂದ್ರಕಾಂತ ಪಾಟೀಲ್ ನೇತೃತ್ವದಲ್ಲಿ ಸಕಲ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆದರೆ ಶಾಸಕರನ್ನು ರೆಸಾರ್ಟ್‍ಗೆ ಕರೆದೊಯ್ಯುವ ಗುಟ್ಟು ಬಹಿರಂಗವಾಗುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ನಡೆದ ಬೆಳವಣಿಗೆಗಳಿಂದ ಬಿಜೆಪಿ ಶಾಸಕರನ್ನು ರೆಸಾರ್ಟ್‍ಗೆ ಕರೆದೊಯ್ಯುವುದನ್ನು ಮುಂದಕ್ಕೆ ಹಾಕಿದೆ ಎಂದು ಹೇಳಲಾಗುತ್ತಿದೆ.

                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap