ಬೆಂಗಳೂರು
ಜೆಡಿಎಸ್ ನಾಯಕರು ಹಾಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಹತಾಶೆಗೊಂಡು ಅಧಿಕಾರ ಕಳೆದುಕೊಳ್ಳುತ್ತೇವೆಂಬ ಭಯದಿಂದ ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿದೆ ಎಂದು ಆರೋಪಿಸಿ, ಅನಗತ್ಯವಾಗಿ ವಿಧಾನಸಭಾಧ್ಯಕ್ಷರಿಗೆ ದೂರು ನೀಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಸಭಾಧ್ಯಕ್ಷರನ್ನು ದಾರಿ ತಪ್ಪಿಸುವ ಕ್ರಮ ಸರಿಯಲ್ಲ. ತಮ್ಮದೇ ಪಾಲುದಾರ ಪಕ್ಷವಾದ ಕಾಂಗ್ರೆಸ್ಸಿನ ಅತೃಪ್ತಿ ಶಮನಗೊಳಿಸಲಾಗದೇ ಅವರ ಆಂತರಿಕ ಜಗಳಗಳಿಗೆ ಬಿಜೆಪಿಯನ್ನು ಜವಾಬ್ದಾರಿಯನ್ನಾಗಿಸುವುದು ಸೂಕ್ತವಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಪದೇಪದೆ ನಮ್ಮ ಶಾಸಕರನ್ನು ಬಿಜೆಪಿಯವರು ಆಕರ್ಷಿಸುತ್ತಿದ್ದಾರೆಂದು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.
ಆದರೆ, ಅವರೇ ನಮ್ಮ ಬಿಜೆಪಿ ಶಾಸಕರಾದ ಸುಭಾಷ್ ಗುತ್ತೇದಾರ್ ಮುಂತಾದವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ಮುಖಂಡರು ಎಂದಿಗೂ ಸಹ ಕಾಂಗ್ರೆಸ್ ಅಥವಾ ಜೆಡಿಎಸ್ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿಲ್ಲ. ಒಂದೊಮ್ಮೆ ಈ ಸರ್ಕಾರ ಕುಸಿದರೆ ತನ್ನ ತಪ್ಪುಗಳು ಮತ್ತು ಒತ್ತಡಗಳಿಂದ ಬೀಳುತ್ತದೆಯೇ ಹೊರತು ವಿರೋಧ ಪಕ್ಷವಾದ ಬಿಜೆಪಿಯಿಂದಲ್ಲ ಎಂದು ಹೇಳಿದ್ದಾರೆ. ಪ್ರವಾಹ ಮತ್ತು ಬರದಂತಹ ಸಮಸ್ಯೆಗಳಿಂದ ರಾಜ್ಯ ಬಳಲುತ್ತಿದೆ.
ಮುಖ್ಯಮಂತ್ರಿಗಳು ಇಂತಹ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗಿದೆ. ಕಂಗಾಲಾದಾಗ ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ ಎಂಬ ಕುಂಟು ನೆಪ ಹೊರ ತರುತ್ತಿದ್ದಾರೆ. 104 ಸದಸ್ಯ ಬಲವಿರುವ ನಾವು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕರ್ತವ್ಯ ಮಾಡುತ್ತಿದ್ದೇವೆ. ಅಭಿವೃದ್ಧಿ ವಿಚಾರಗಳಲ್ಲಿ ಸರ್ಕಾರವನ್ನು ಬೆಂಬಲಿಸುತ್ತಿದ್ದೇವೆ. ಸರ್ಕಾರವನ್ನು ಅಸ್ಥಿರಗೊಳಿಸುವ ಕಾರ್ಯವನ್ನು ಎಂದು ಸಹ ಬಿಜೆಪಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








