ಬೆಂಗಳೂರು :
ಬೆಂಗಳೂರಿನಲ್ಲಿ 2025ರ ಹೊಸ ವರ್ಷದ ಆಚರಣೆಯಿಂದ ಬಿಎಂಟಿಸಿಗೆ 5 ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಕೆಯಾಗಿದೆ. 35 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಬಿಎಂಟಿಸಿ ಬಸ್‌ಗಳನ್ನು ಬಳಸಿದ್ದಾರೆ. ಆದರೆ, ಎಂ.ಜಿ. ರಸ್ತೆಯಲ್ಲಿ 15 ಮೆಟ್ರಿಕ್ ಟನ್ ಕಸ ಸಂಗ್ರಹವಾಗಿದೆ. ಪಾಲಿಕೆ ಸಿಬ್ಬಂದಿ ಕಸ ವಿಲೇವಾರಿ ಮಾಡಿದ್ದಾರೆ.
ಹೊಸ ವರ್ಷ ಹಿನ್ನೆಲೆಯಲ್ಲಿ ಬಿಎಂಟಿಸಿಗೆ ಕೋಟಿ ಕೋಟಿ ರೂ. ಆದಾಯ ಬಂದಿದೆ. ಹೊಸ ವರ್ಷದ ಸಂಭ್ರಮದಲ್ಲಿ ಭಾಗಿಯಾಗುವವರ ಅನುಕೂಲ ದೃಷ್ಟಿಯಿಂದ ಬಿಎಂಟಿಸಿ ನಗರದ ವಿವಿಧ ಭಾಗಗಳಿಗೆ ಹೆಚ್ಚುವರಿ ಬಸ್ಗಳ ವ್ಯವಸ್ಥೆ ಮಾಡಿತ್ತು. ನಿನ್ನೆ ಮಧ್ಯರಾತ್ರಿ ಎರಡು ಗಂಟೆಯವರೆಗೆ ಬಿಎಂಟಿಸಿ ಬಸ್ಗಳು ಸಂಚಾರ ಮಾಡಿದ್ದವು. ನಿನ್ನೆ ಒಂದೇ ದಿನ 35 ಲಕ್ಷದ 70 ಸಾವಿರದ 842 ಪ್ರಯಾಣಿಕರು ಪ್ರಯಾಣ ಮಾಡಿದ್ದು, ಇದರಿಂದ 5 ಕೋಟಿ 48 ಲಕ್ಷದ 89 ಸಾವಿರ 254 ರೂ. ಕಲೆಕ್ಷನ್ ಆಗಿದೆ.
ಡಿಸೆಂಬರ್ 31 ರಂದು ನಗರದ ವಿವಿಧ ಭಾಗಗಳಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಎಂಜಿ ರಸ್ತೆಯಿಂದ ನಗರದ 13 ಸ್ಥಳಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ 11 ಗಂಟೆಯಿಂದ ರಾತ್ರಿ 2 ಗಂಟೆಯವರೆಗೆ ಹೆಚ್ಚುವರಿ ಬಸ್ ಕಾರ್ಯಚರಣೆ ಮಾಡಿದ್ದವು.
15 ಮೆಟ್ರಿಕ್ ಟನ್ ಕಸ ಸಂಗ್ರಹ
ಇನ್ನು ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಯ ಎಫೆಕ್ಟ್ ಜೋರಾಗಿ ತಟ್ಟಿದಂತಿದೆ. ಏಕೆಂದರೆ ಎಂಜಿ ರಸ್ತೆ ಸುತ್ತಮುತ್ತ 15 ಮೆಟ್ರಿಕ್ ಟನ್ ಕಸ ಸಂಗ್ರಹವಾಗಿದೆ. ತಡರಾತ್ರಿ ಮೂರು ಗಂಟೆಯಲ್ಲಿ ಪಾಲಿಕೆ ಕಾರ್ಯಾಚರಣೆ ನಡೆಸಿ 70 ಪೌರಕಾರ್ಮಿಕರಿಂದ ಎಂ.ಜಿ.ರಸ್ತೆ ಸ್ವಚ್ಛತೆ ಮಾಡಲಾಗಿದೆ. ಆ ಮೂಲಕ ಪಾಲಿಕೆ ಸಿಬ್ಬಂದಿ 15 ಮೆಟ್ರಿಕ್ ಟನ್ ಕಸ ಸಂಗ್ರಹಿಸಿದ್ದು, 25 ಆಟೋ, 3 ಕಾಂಪ್ಯಾಕ್ಟರ್ಗಳ ಮೂಲಕ ಕಸವನ್ನು ವಿಲೇವಾರಿ ಮಾಡಲಾಗಿದೆ.