ಬೆಂಗಳೂರು :
ಟ್ಯಾಕ್ಟರ್ ಮತ್ತು ದ್ವಿವಾಹನ ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ, 12 ಲಕ್ಷ ಮೌಲ್ಯದ 2 ಟ್ಯಾಕ್ಟರ್ , ಟ್ರ್ಯಾಲಿ ಹಾಗೂ 6 ದ್ವಿಚಕ್ರವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗೋವಿಂದರಾಜು.ವಿ (35) ಕೆಂಪರಾಜು. ಕೆ.ಎಸ್.( 22 ), ಬಾಲಾಜಿ (20 ), ಲೋಕೇಶ್.ಕೆ( 21) ಬಂಧಿತ ಆರೋಪಿಗಳು.
ಬಂಧಿತರಿಂದ ಸುಮಾರು 12 ಲಕ್ಷ ರೂ.ಗಳ ಬೆಲೆ ಬಾಳುವ 2- ಟ್ರ್ಯಾಕ್ಟರ್, 2-ಟ್ರ್ಯಾಲಿ, 6-ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಬಾಗಲಗುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಪರಾಧ ವಿಭಾಗದ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿರುವ ಶೆಟ್ಟಿಹಳ್ಳಿ ಪ್ರಿನ್ಸ್ ಟೌನ್ ಅಪಾರ್ಟ್‍ಮೆಂಟ್ ಬಳಿ ವಾಹನಗಳ ತಪಾಸಣೆ ಮಾಡುವಾಗ ಅನುಮಾನಾಸ್ಪದವಾಗಿ ದ್ವಿಚಕ್ರವಾಹನದಲ್ಲಿ ಬಂದ ಆರೋಪಿಗಳನ್ನು ವಾಹನದ ದಾಖಲಾತಿಗಳನ್ನು ತೋರಿಸುವಂತೆ ಕೇಳಿದ್ದರು. ಈ ವೇಳೆ ಆರೋಪಿಗಳ ಬಳಿ ಯಾವುದೇ ದಾಖಲಾತಿಗಳಿರಲಿಲ್ಲ. ಹೀಗಾಗಿ ಅನುಮಾನಗೊಂಡ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ವಾಹನ ಕಳವು
ಮಾಡಿರುವುದಾಗಿ ತಿಳಿದು ಬಂದಿದೆ.
ಆರೋಪಿಗಳು 2019 ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯ ಪಟ್ನಾಯಕನಹಳ್ಳಿ ಪೊಲೀಸ್ ಠಾಣೆ ಡಕಾಯಿತಿ ಪ್ರಕರಣದಲ್ಲಿ
ಮತ್ತು ತುಮಕೂರು ಜಿಲ್ಲೆ ಬಡವನಹಳ್ಳಿ ಪೊಲೀಸ್ ಠಾಣೆ ಸಾಮಾನ್ಯ ಕಳವು (ಕುರಿ ಕಳವು) ಪ್ರಕರಣದಲ್ಲಿ ಭಾಗಿಯಾಗಿದ್ದರು. ಬಂಧಿತ ಕೆಂಪರಾಜು, ಬಾಲಾಜಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರ ಬಂದಿದ್ದರು. ಇನ್ನು ಗೋವಿಂದರಾಜು ಮತ್ತು ಲೋಕೇಶ್.ಕೆ ತಲೆ ಮರೆಸಿಕೊಂಡು ಓಡಾಡುತ್ತಾ ಇಂತಹ ಕೃತ್ಯಗಳಲ್ಲಿ ತೊಡಗಿರುವುದಾಗಿ ತನಿಖೆಯಿಂದ ತಿಳಿದು
ಬಂದಿದೆ.
ಆರೋಪಿಗಳ ಬಂಧನದಿಂದ ಬಾಗಲಗುಂಟೆ ಪೊಲೀಸ್ ಠಾಣೆಯ 2- ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿ ಕಳವು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ 2-ದ್ವಿಚಕ್ರವಾಹನ ಕಳವು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯ 1-ದ್ವಿಚಕ್ರವಾಹನ ಕಳವು ಒಟ್ಟು 5 ಪ್ರಕರಣಗಳು ಪತ್ತೆಯಾಗಿವೆ. ಉಳಿದ 3 ದ್ವಿಚಕ್ರವಾಹನಗಳ ವಾರಸುದಾರರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಶವಂತಪುರ ಉಪ ವಿಭಾಗದ ಎಸಿಪಿ ಶ್ರೀನಿವಾಸ್‍ರೆಡ್ಡಿ ಮಾರ್ಗದರ್ಶನದಲ್ಲಿ ಬಾಗಲಗುಂಟೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕುಮಾರ್.ಎಂ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
