ಕೋಲ್ಕತ್ತಾ:
ಚಿಕಿತ್ಸೆಗೆಂದು ಪಶ್ಚಿಮ ಬಂಗಾಳದ ಕೋಲ್ಕತ್ತಾಗೆ ಬಂದು ನಿಗೂಢವಾಗಿ ಕಣ್ಮರೆಯಾಗಿದ್ದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಶವವಾಗಿ ಪತ್ತೆಯಾಗಿದ್ದಾರೆ. ಕೋಲ್ಕತ್ತಾದ ನ್ಯೂ ಟೌನ್‌ನಲ್ಲಿರುವ ಮನೆಯೊಂದರಲ್ಲಿ ಅಜೀಂ ಮೃತದೇಹ ಸಿಕ್ಕಿದ್ದು, ಇದೊಂದು ಪೂರ್ವ ನಿಯೋಜಿತ ಕೊಲೆ ಎಂದು ಪೊಲೀಸರು ತಿಳಿಸಿದ್ದಾರೆ.
ದೀರ್ಘಾಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದ ಅಜೀಂ ಮೇ 12ರಂದು ಕೋಲ್ಕತ್ತಾಗೆ ಬಂದಿದ್ದರು. ಅದೇ ದಿನ ಬಾರಾನಗರ್‌ನಲ್ಲಿರುವ ಅವರ ಸ್ನೇಹಿತ ಗೋಪಾಲ್ ಬಿಸ್ವಾಸ್ ಮನೆಗೆ ತೆರಳಿದ್ದರು. ಎರಡು ದಿನಗಳ ನಂತರ ಮೇ 14ರಂದು ಅವರು ಸ್ನೇಹಿತನ ಮನೆಯಿಂದ ಹೊರಟಿದ್ದರು. ಅಂದೇ ಅಥವಾ ಮರುದಿನ ವಾಪಾಸ್ ಬರುವುದಾಗಿ ಗೋಪಾಲ್ ಬಿಸ್ವಾಸ್‌ಗೆ ಅಜೀಂ ಹೇಳಿ ಹೋಗಿದ್ದರು. ಇದಾದ ಬಳಿಕ ಅವರು ವಾಪಾಸ್ ಮರಳಿ ಬರಲೇ ಇಲ್ಲ. ಇದರಿಂದ ಗಾಬರಿಗೊಂಡ ಗೋಪಾಲ್ ಪೊಲೀಸರಿಗೆ ದೂರು ನೀಡಿ ಘಟನೆ ಬಗ್ಗೆ ವಿವರಿಸಿದ್ದಾರೆ.
ಅಜೀಂ ಬಾಂಗ್ಲಾದೇಶ ಮಾತ್ರವಲ್ಲದೇ ಭಾರತದ ಸಿಮ್ ಕೂಡ ಹೊಂದಿದ್ದಾರೆ. ಅವರ ಎರಡೂ ನಂಬರ್ ಸ್ವಿಚ್ ಆಫ್ ಬರುತ್ತಿತ್ತು. ಅವರು ತಮ್ಮ ಜೊತೆಗೆ ತಂದಿದ್ದ ಎಲ್ಲಾ ವಸ್ತುಗಳನ್ನು ತಮ್ಮ ಮನೆಯಲ್ಲೇ ಬಿಟ್ಟು ಹೋಗಿದ್ದಾರೆ ಎಂದು ಗೋಪಾಲ್ ಹೇಳಿದ್ದಾರೆ. ಮತೊಂದೆಡೆ ಅಜೀಂ ಪುತ್ರಿ ಮುಮ್ತರಿನ್ ಫಿರ್ದೋದ್ ತಮ್ಮ ತಂದೆ ಕಣ್ಮರೆ ಆಗಿರುವ ಬಗ್ಗೆ ಢಾಕಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಘಟನೆ ಬಗ್ಗೆ ಢಾಕಾದಲ್ಲಿ ಮಾಧ್ಯಮಗೋಷ್ಠಿ ನಡೆಸಿದ್ದ ಅಲ್ಲಿನ ಗೃಹ ಸಚಿವ ಅಸಾದುದ್ದೀನ್ ಖಾನ್, ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಸಂಸದ ಅಜೀಂ ಕೊಲೆಯಾಗಿದ್ದಾರೆ. ಪ್ರಕರಣಕ್ಕೆ ಸಂಬಂದಿಸಿದಂತೆ ಬಾಂಗ್ಲಾದೇಶ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಅಜೀಂ ಕೊಲೆ ಪ್ರಕರಣದಲ್ಲಿ ಬಾಂಗ್ಲಾದೇಶಿಗರೇ ಭಾಗಿಯಾಗಿದ್ದಾರೆ. ಇನ್ನು ಈ ಕೊಲೆಗೆ ಕಾರಣ ಏನೆಂಬುದು ಮುಂದಿನ ತನಿಖೆಯಲ್ಲಿ ಬಹಿರಂಗವಾಗಲಿದೆ ಎಂದು ಹೇಳಿದ್ದಾರೆ. ಅನ್ವರುಲ್ ಅಜೀಂ ಅನಾರ್ ಆಡಳಿತ ಪಕ್ಷ ಅವಾಮಿ ಲೀಗ್‌ನ ಸಂಸದರಾಗಿದ್ದರು. ಅವರು ಬಾಂಗ್ಲಾದೇಶದ ಜೆನೈದಾ-4 ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.