ಬಾಂಗ್ಲಾ :
ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಿಂದಲ್ಲಿ ನಡೆಯಬಾರದ ಘಟನೆಯೊಂದು ನಡೆದಿದೆ. ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ಅಭಿಮಾನಿಯೊಬ್ಬರನ್ನು ಥಳಿಸಲಾಗಿದ್ದು, ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಟೈಗರ್ ರಾಬಿ ಎಂದು ಕರೆಯಲ್ಪಡುವ ಈ ವ್ಯಕ್ತಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ಸೂಪರ್ ಫ್ಯಾನ್. ಬಾಂಗ್ಲಾ ತಂಡ ಎಲ್ಲೆಲ್ಲಿ ಪಂದ್ಯವನ್ನಾಡುತ್ತದೋ, ಅಲ್ಲೆಲ್ಲ ಈತ ಹಾಜರಿರುತ್ತಾನೆ. ವರದಿಯ ಪ್ರಕಾರ, ಕಾನ್ಪುರ ಟೆಸ್ಟ್ ಪಂದ್ಯದ ವೇಳೆ ಟೈಗರ್ ರಾಬಿ, ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ನಿಂದಿಸುತ್ತಿದ್ದನ್ನು ನೋಡಿದ ಟೀಂ ಇಂಡಿಯಾ ಫ್ಯಾನ್ಸ್ ಆತನಿಗೆ ಥಳಿಸಿದ್ದಾರೆ ಎಂದು ವರದಿಯಾಗಿದೆ.
ತೀವ್ರ ಥಳಿತಕ್ಕೊಳಗಾದ ಟೈಗರ್ ರಾಬಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಈ ವಿಷಯ ತಿಳಿದ ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಟೈಗರ್ ರಾಬಿ ಮೇಲೆ ಏಕೆ ಹಲ್ಲೆ ಮಾಡಲಾಗಿದೆ ಎಂಬುದರ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಈತ, ಮೊಹಮ್ಮದ್ ಸಿರಾಜ್ ಅವರನ್ನು ನಿಂದಿಸುತ್ತಿದ್ದ ಎಂದು ಹೇಳಲಾಗಿದ್ದು, ಇದರಿಂದ ಜನರು ಆಕ್ರೋಶಗೊಂಡಿದ್ದಾರೆ. ಅಲ್ಲದೆ ಈತ ಚೆನ್ನೈನಲ್ಲೂ ಟೀಂ ಇಂಡಿಯಾ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಎಂಬ ಆರೋಪವೂ ಇದೆ. ಇದೇ ಕಾರಣಕ್ಕೆ ಅಭಿಮಾನಿಗಳು ಆತನನ್ನು ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾನ್ಪುರದಲ್ಲಿ ಬಾಂಗ್ಲಾದೇಶ ತಂಡಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಾಂಗ್ಲಾದೇಶ ತಂಡ ಕಾನ್ಪುರ ತಲುಪಿದಾಗ ಹಲವು ಸಂಘಟನೆಗಳು ಬಾಂಗ್ಲಾ ತಂಡದ ವಿರುದ್ಧ ರಸ್ತೆಗಿಳಿದು ಘೋಷಣೆಗಳನ್ನು ಕೂಗಿದ್ದವು. ಇದಕ್ಕೆ ಕಾರಣವೆಂದರೆ, ಬಾಂಗ್ಲಾದೇಶದಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ಅಲ್ಲಿನ ಹಿಂದೂಗಳ ಮೇಲೆ ದಾಳಿ ಮಾಡಲಾಗಿತ್ತು. ಇದರಿಂದ ಹಲವು ಕುಟುಂಬಗಳು ಜೀವ ಮತ್ತು ಆಸ್ತಿ ನಷ್ಟವನ್ನು ಅನುಭವಿಸಿದ್ದವು. ಇದೀಗ ಬಾಂಗ್ಲಾದೇಶದ ಅಭಿಮಾನಿಯೊಬ್ಬನಿಗೆ ಥಳಿಸಿರುವ ಘಟನೆಯೂ ಅದೇ ಘಟನೆಗೆ ತಳುಕು ಹಾಕಿಕೊಂಡಿದೆ. ಆದರೆ ಈ ಬಗ್ಗೆ ಇನ್ನಷ್ಟೇ ಸಂತ್ಯಾಶ ಹೊರಬರಬೇಕಿದೆ.
ಕಾನ್ಪುರ ಟೆಸ್ಟ್‌ನ ಮೊದಲ ದಿನ ಕೇವಲ 35 ಓವರ್‌ಗಳನ್ನು ಮಾತ್ರ ಎಸೆಯಲು ಸಾಧ್ಯವಾಯಿತು. ಮಳೆಯಿಂದಾಗಿ ಪಂದ್ಯ ತಡವಾಗಿ ಆರಂಭವಾಯಿತು. 10 ಗಂಟೆಗೆ ಟಾಸ್ ನಡೆದಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಬಾಂಗ್ಲಾದೇಶ ಮೊದಲ ಎರಡು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಆದರೆ, ಇದಾದ ಬಳಿಕ ಆಟ ನಿಲ್ಲುವ ವೇಳೆಗೆ ಬಾಂಗ್ಲಾದೇಶ 3 ವಿಕೆಟ್ ಕಳೆದುಕೊಂಡು 107 ರನ್ ಗಳಿಸಿದೆ. ಆದರೆ ಮಂದ ಬೆಳಕಿನಿಂದಾಗಿ ಹಾಗೂ ಮಳೆಯಿಂದಾಗಿ ನಿಗದಿತ ಸಮಯಕ್ಕೂ ಮುನ್ನವೇ ಮೊದಲ ದಿನದಾಟವನ್ನು ಅಂತ್ಯಗೊಳಿಸಲಾಯಿತು.