ಕೊಲ್ಕೋತ್ತಾ:
ಭಾರತಕ್ಕೆ ವೈದ್ಯಕೀಯ ಚಿಕಿತ್ಸೆಗೆಂದು ಆಗಮಿಸಿದ್ದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಝೀಂ ಅನಾರ್ ಕಳೆದ ಕೆಲವು ದಿನಗಳಿಂದ ಕೋಲ್ಕತ್ತಾದಲ್ಲಿ ನಾಪತ್ತೆಯಾಗಿದ್ದಾರೆ ಎಂದು ಬಾಂಗ್ಲಾದೇಶದ ಉಪ ಹೈಕಮಿಷನ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಂಗ್ಲಾದೇಶದ ಆಡಳಿತಾರೂಢ ಅವಾಮಿ ಲೀಗ್ ನ ಸಂಸದರಾಗಿರುವ ಅನಾರ್ ಅವರು ಮೇ 13ರಿಂದ ನಾಪತ್ತೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ವೈದ್ಯಕೀಯ ಚಿಕಿತ್ಸೆಗೆ ಮೇ 12ರಂದು ಕೋಲ್ಕತ್ತಾಕ್ಕೆ ಆಗಮಿಸಿದ್ದರು.
ಅನಂತರ ಕೋಲ್ಕತ್ತಾದ ಬಾರಾನಗರ್ನಲ್ಲಿರುವ ಗೆಳೆಯನ ನಿವಾಸದಲ್ಲಿ ತಂಗಿದ್ದರು. ಅವರು ಮೇ 13ರಂದು ಕೆಲವರನ್ನು ಭೇಟಿಯಾಗಲು ತೆರಳಿದ್ದರು. ಆದರೆ, ಹಿಂದಿರುಗಲಿಲ್ಲ. ಅನಂತರ ಅವರ ಗೆಳೆಯ ಪೊಲೀಸರಿಗೆ ದೂರು ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರನ್ನು ಇದುವರೆಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ನಾವು ಪೊಲೀಸರು ಹಾಗೂ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅನಾರ್ ನವದೆಹಲಿಗೆ ತೆರಳಿರುವುದಾಗಿ ಕುಟುಂಬಸ್ಥರಿಗೆ ಸಂದೇಶಗಳನ್ನು ಕಳುಹಿಸಿರುವ ಬಗ್ಗೆಯೂ ಮಾಹಿತಿ ಇದೆ. ಆದರೆ ಈ ಬಗ್ಗೆ ದೃಢೀಕರಣವಿಲ್ಲ. ಅವರನ್ನು ಇದುವರೆಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ನಾವು ಪೊಲೀಸರು ಹಾಗೂ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಬಾಂಗ್ಲಾದೇಶದ ಉಪ ಹೈಕಮಿಷನ್‌ನ ಹಿರಿಯ ಅಧಿಕಾರಿ ಹೇಳಿದ್ದಾರೆ. ಅನಾರ್ ಸಂಪರ್ಕಕ್ಕೆ ಸಿಗದ ಬಗ್ಗೆ ಅವರ ಕುಟುಂಬವು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮಾಹಿತಿ ನೀಡಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಅವರ ಪುತ್ರಿ ಮುಮ್ತಾರಿನ್ ಫಿರ್ದೌಸ್ ಢಾಕಾ ಮೆಟ್ರೋಪಾಲಿಟನ್ ಪೊಲೀಸರಿಗೆ ನಾಪತ್ತೆ ಬಗ್ಗೆ ದೂರು ನೀಡಿದ್ದಾರೆ.
ಅನಾರ್ ಅವರು ಕೊನೆಯ ಬಾರಿಗೆ ಬಿಹಾರದಲ್ಲಿ ಮೊಬೈಲ್ ಬಳಕೆ ಮಾಡಿರುವುದು ನೆಟ್‌ವರ್ಕ್ ಪರಿಶೀಲಿಸಿದಾಗ ಪತ್ತೆಯಾಗಿದೆ. ಅವರ ಬಾಂಗ್ಲಾದೇಶ ಮತ್ತು ಭಾರತೀಯ ಸಿಮ್ ಕಾರ್ಡ್‌ಗಳನ್ನು ಮೇ 14ರಿಂದ ಸ್ವಿಚ್ ಆಫ್ ಮಾಡಲಾಗಿದೆ. ಅವರ ಹಠಾತ್ ಕಣ್ಮರೆ ಬಗ್ಗೆ ಕಳವಳ ವ್ಯಕ್ತವಾಗಿದೆ.