ಬಸವನ ನಾಡು, ಸೂಫಿ ಸಂತರ ಬೀಡು ಬೀದರನಲ್ಲಿ ನಡೆದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಯಶಸ್ವಿ: ತಗಡೂರು

ಬೆಂಗಳೂರು: ಬೀದರನಲ್ಲಿ ಎರಡು ದಿನಗಳ ಕಾಲ ನಡೆದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಅರ್ಥಪೂರ್ಣವಾಗಿ ಮತ್ತು ಯಶಸ್ವಿಯಾಗಿ ನಡೆಯಲು ಕಾರಣರಾದ ಎಲ್ಲರಿಗೂ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(ಕೆಯುಡಬ್ಲೂೃಜೆ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

40ನೇ ಸಮ್ಮೇಳನ ಎಲ್ಲಕ್ಕಿಂತ ಭಿನ್ನವಾಗಿತ್ತು. ಗಾಂಧಿ ಮತ್ತು ಅಂಬೇಡ್ಕರ್ ಅವರು, ಪತ್ರಕರ್ತರಾಗಿ ಸಲ್ಲಿಸಿದ ಸೇವೆ ಬಗ್ಗೆ ಗೋಷ್ಠಿ ಆಯೋಜಿಸಿದ್ದು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮತ್ತು ಮಾಧ್ಯಮ ವಿಷಯ ಬಗ್ಗೆ ಚರ್ಚೆ ನಡೆದಿದ್ದು ಸಮ್ಮೇಳನವನ್ನು ಅರ್ಥಪೂರ್ಣಗಿಸಿತು. ಆರ್ಟಿಫಿಷಿಯಲ್ ಇಂಟಲಜೆನ್ಸಿ ಮತ್ತು ಡಿಜಿಟಲೀಕರಣ ಪ್ರಭಾವ ಬಗೆಗಿನ ಗೋಷ್ಠಿ ಸುದ್ದಿ ಮನೆಯಲ್ಲಿನ ಎಲ್ಲರಿಗೂ ಹೊಸ ಆಯಾಮಗಳ ಸಾಧ್ಯತೆಯನ್ನು ಉಣಬಡಿಸಿತು ಎಂದಿದ್ದಾರೆ.

ಮಾಹಿತಿ ಹಕ್ಕು ಆಯೋಗ ಮತ್ತು ಪತ್ರಕರ್ತರು ಎಂಬ ವಿಷಯದ ಗೋಷ್ಠಿ ಪ್ರಸ್ತುತವಾಗಿತ್ತು. ಗಡಿ ಭಾಗದ ಸಮಸ್ಯೆ ಬಗ್ಗೆ ನಡೆದ ಉಪನ್ಯಾಸ, ಮಾಧ್ಯಮ ಮತ್ತು ಉದ್ಯಮ ಬಗ್ಗೆ ನಡೆದ ಚರ್ಚೆ ಎಲ್ಲವೂ ಸಮ್ಮೇಳನಕ್ಕೆ ಹೊಸ ಮೆರಗನ್ನು ನೀಡಿತು ಎಂದು ಹೇಳಿದ್ದಾರೆ.
ಚಾಮರಾಜನಗರದಿಂದ ಹಿಡಿದು, ಕಲಬುರ್ಗಿ, ಬಿಜಾಪುರದ ತನಕ ಎಲ್ಲಾ ಜಿಲ್ಲೆಯ ಪತ್ರಕರ್ತರು ಭಾಗವಹಿಸಿದ ಸಂಭ್ರ ಮತ್ತು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದ ಕ್ಷಣ ಮರೆಯಲಾಗದು ಎಂದಿದ್ದಾರೆ.

ಸಿಎಂ, ಕೆವಿಪಿಗೂ ಧನ್ಯವಾದ: ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಿಕೊಡುವ ಮೂಲಕ ಮಾಧ್ಯಮ ಸ್ನೇಯಿ ಸಿಎಂ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದರು. ಸಂಘಟನೆ ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡಿದ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ನೀಡಿದ ಸಹಕಾರ ಅನನ್ಯವಾದದ್ದು ಎಂದು ತಗಡೂರು ಸ್ಮರಿಸಿದ್ದಾರೆ.
ಸ್ವಾಗತ ಸಮಿತಿಗೆ ಥ್ಯಾಂಕ್ಸ್: ರಾಜ್ಯ ಮಟ್ಟದ ಸಮ್ಮೇಳನ ಸಂಘಟಿಸುವುದು ಕಷ್ಟದ ಮತ್ತು ಸವಾಲಿನ ಕೆಲಸ. ಕಡಿಮೆ ಅವಧಿಯಲ್ಲಿ ಈ ಸವಾಲನ್ನು ಸಾಧ್ಯವಾಗಿಸಿದ, ಬೀದರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ, ಮುಖ್ಯವಾಗಿ ಸ್ವಾಗತ ಸಮಿತಿ ಅಧ್ಯಕ್ಷರು ಮತ್ತು ಸಚಿವರಾದ ಈಶ್ವರ ಖಂಡ್ರೆ ಅವರು, ಈ ನಿಟ್ಟಿನಲ್ಲಿ ಶ್ರಮಿಸಿದ ಜಿಲ್ಲಾಧ್ಯಕ್ಷ ಆನಂದ ದೇವಪ್ಪ ಅವರ ನೇತೃತ್ವದ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.
ಬೀದರ ನೆಲದ ಹಬ್ಬ: ಪತ್ರಕರ್ತರ ಸಮ್ಮೇಳನವನ್ನ ಬೀದರ ನೆಲದ ಹಬ್ಬವಾಗಿಸಿದ, ಊಟದಿಂದ ಹಿಡಿದು ಎಲ್ಲ ರೀತಿಯ ಆತಿಥ್ಯ ನೀಡಿದ ಬೀದರ ಜಿಲ್ಲಾ ಘಟಕಕ್ಕೆ, ಜಿಲ್ಲೆಯ ಸಮಸ್ತರಿಗೆ, ಉಪಸಮಿತಿಗಳ ಜವಾಬ್ದಾರಿ ಹೊತ್ತು ಕೆಲಸ ಮಾಡಿದ ತಂಡಗಳಿಗೆ, ಜಿಲ್ಲಾಡಳಿತಕ್ಕೆ ವಂದನೆಗಳನ್ನು ಸಲ್ಲಿಸಿದ್ದಾರೆ.
ಕಳೆಗಟ್ಟಿದ ಸಮ್ಮೇಳನ: ಬಸವನ ನಾಡಿನಲ್ಲಿ ಈ ಸಮ್ಮೇಳನ ವಿಭಿನ್ನವಾಗಿ ಆಯೋಜಿಸಲು ಮತ್ತು ಅರ್ಥಪೂರ್ಣವಾಗಿಸಲು ನಿರಂತರವಾಗಿ ನಮ್ಮ ಜೊತೆಯಲ್ಲಿ ಸದಾ ಸಾಥ್ ನೀಡಿದ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಘಟಕಗಳು ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಸಮ್ಮೇಳನ ಕಳೆಗಟ್ಟಲು ಸದಸ್ಯರೆಲ್ಲರೂ ಮುಖ್ಯ. ಈ ಸಮ್ಮೇಳನ ಸಲುವಾಗಿ ನಮ್ಮ ಪ್ರೀತಿಯ ಕರೆಗೆ ವಿಶ್ವಾಸವಿಟ್ಟು ಬೀದರಗೆ ಬಂದವರಿಗೆ ಯಾವುದಾದರೂ ಕಾರಣಕ್ಕಾಗಿ ಬೇಸರವಾಗಿದ್ದರೆ ಕ್ಷಮೆ ಇರಲಿ. ಸವಿನೆನಪುಗಳು ಮಾತ್ರವೇ ನಿಮ್ಮ ಹೃದಯದಲ್ಲಿರಲಿ ಎಂದು ತಗಡೂರು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link