ಬೆಂಗಳೂರು:
ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ಪ್ರಾಣಿ ವಿನಿಮಯ ಕಾರ್ಯಕ್ರಮದಡಿ, ಪಾಟ್ನಾ ಮೃಗಾಲಯದಿಂದ ಎರಡು ಮೊಸಳೆ, ಒಂದು ಬಿಳಿ ಹುಲಿ ಹಾಗೂ ಒಂದು ಕಾಡು ಬೆಕ್ಕನ್ನು ಉದ್ಯಾನಕ್ಕೆ ತರಲಾಗಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಒಂದು ಜೀಬ್ರಾ ಮತ್ತು ಎರಡು ಗಂಡು ತಮಿನ್ ಜಿಂಕೆಗಳನ್ನು ಪಟ್ನಾ ಮೃಗಾಲಯಕ್ಕೆ ಕಳುಹಿಸಲಾಗಿದೆ. ಪ್ರಾಣಿಗಳು ಆರೋಗ್ಯವಾಗಿವೆ. 45 ದಿನ ಕ್ವಾರೆಂಟೈನ್‌ನಲ್ಲಿಟ್ಟು ನಂತರ ವೀಕ್ಷಣೆಗೆ ಬಿಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಹಾರದ ಪಾಟ್ನಾದಲ್ಲಿರುವ ಸಂಜಯ್ ಗಾಂಧಿ ಜೈವಿಕ ಉದ್ಯಾನವನದಲ್ಲಿ ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಈ ಪ್ರಾಣಿಗಳನ್ನು ಮೃಗಾಲಯಕ್ಕೆ ತರಲಾಯಿತು ಎಂದು ಬಿಬಿಪಿ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್ ತಿಳಿಸಿದ್ದಾರೆ.
ಕಾರ್ಯಕ್ರಮದ ಭಾಗವಾಗಿ, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಒಂದು ಗಂಡು ಜೀಬ್ರಾ ಮತ್ತು ಎರಡು ಗಂಡು ತಮಿನ್ ಜಿಂಕೆಗಳನ್ನು ಪಾಟ್ನಾ ಮೃಗಾಲಯಕ್ಕೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಉದ್ಯಾನವನದಲ್ಲಿ ನಾಲ್ಕು ಘರಿಯಲ್ ಮೊಸಳೆಗಳಿದ್ದು, ಅವುಗಳಿಗೆ ವಯಸ್ಸಾಗಿವೆ. ಸಂತಾನೋತ್ಪತ್ತಿಗಾಗಿ ಎರಡು ಗಂಡು ಮತ್ತು ಒಂದು ಹೆಣ್ಣು ಘರಿಯಲ್ ಮೊಸಳೆ ತರಲಾಗಿದೆ. ಉದ್ಯಾನದಲ್ಲಿ ಝಾನ್ಸಿ ಮತ್ತು ವೀರ್ ಎಂಬ ಎರಡು ಬಿಳಿ ಹುಲಿಗಳಿದ್ದವು. ಈಗ ಪಟ್ನಾದ ಅತಿಥಿ ಆಗಮನದಿಂದಾಗಿ ಬಿಳಿ ಹುಲಿಗಳ ಸಂಖ್ಯೆ ಮೂರಕ್ಕೇರಿದೆ. ಹೆಣ್ಣು ಕಾಡು ಬೆಕ್ಕನ್ನೂ ಕೂಡ ಉದ್ಯಾನವನಕ್ಕೆ ಕರೆತರಲಾಗಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ ಪಟ್ನಾ ಮೃಗಾಲಯದಿಂದ ಪ್ರಾಣಿಗಳನ್ನು ತರುವ ಸಂದರ್ಭದಲ್ಲಿ ಬುಧವಾರ ತೆಲಂಗಾಣ ರಾಜ್ಯದ ನಿರ್ಮಲ್ ಎಂಬಲ್ಲಿ ಲಾರಿ ಸ್ಕಿಡ್ ಆಗಿ ಅಪಘಾತಕ್ಕೀಡಾಗಿತ್ತು ಎಂದು ತಿಳಿದುಬಂದಿದ್ದು. ನಂತರ ಪ್ರಾಣಿ ಪಾಲಕ ಹರಿಶ್ಚಂದ್ರ ಅವರು ಪ್ರಯತ್ನ ಮಾಡಿ ಪ್ರಾಣಿಗಳನ್ನು ಸುರಕ್ಷಿತವಾಗಿ ಬೇರೊಂದು ವಾಹನಕ್ಕೆ ಸ್ಥಳಾಂತರಿಸಿ ಯಾವುದೇ ತೊಂದರೆ ಇಲ್ಲದಂತೆ ಬನ್ನೇರುಘಟ್ಟಕ್ಕೆ ತಂದಿದ್ದಾರೆಂದು ತಿಳಿದುಬಂದಿದೆ.