ಮೈಸೂರು:
ಪ್ರಜಾಪ್ರಭುತ್ವ ಒಂದು ವ್ಯವಸ್ಥೆಯಲ್ಲ. ಅದೊಂದು ಮೌಲ್ಯ. ಅದನ್ನು ಗೌರವಿಸೋಣ. ಈ ನೆಲದಲ್ಲಿ ಸೌಹಾರ್ದದ ಕುರುಹುಗಳಿವೆ. ಇಲ್ಲಿನ ಬಿಸಿಲು ಕೂಡ ಮಾನವೀಯತೆಯ ಪ್ರತೀಕವಾಗಿದೆ. ದೇವಿ ಚಾಮುಂಡಿ ನಮ್ಮೊಳಗಿನ ದ್ವೇಷ, ಅಸಹಿಷ್ಣುತೆಯನ್ನು ನಾಶ ಮಾಡಲಿ ಎಂದು ದಸರಾ ಉದ್ಘಾಟಕರಾದ ಸಾಹಿತಿ ಬಾನು ಮುಷ್ತಾಕ್ ತಿಳಿಸಿದರು.
ನಗರದಲ್ಲಿ ಸೋಮವಾರ ದಸರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ದೇವಿ ಚಾಮುಂಡಿಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ. ಸರ್ವ ಜನಾಂಗದ ತೋಟವಾದ ನಾಡಿನಲ್ಲಿ ಪ್ರತಿ ಹೂ ತನ್ನ ಬಣ್ಣದಲ್ಲೇ ಅರಳಲಿ, ತನ್ನ ಸುವಾಸನೆಯನ್ನೇ ಬೀರಲಿ, ಪ್ರತಿ ಹಕ್ಕಿ ತನ್ನ ರಾಗದಲ್ಲೇ ಹಾಡಲಿ. ಆದರೆ ಎಲ್ಲವೂ ಒಟ್ಟಾದಾಗ ಸೌಹಾರ್ದದ ಹಾಡಾಗಲಿ’ ಎಂದು ಆಶಿಸಿದರು.
ದಸರಾ ಮೈಸೂರು ನಗರ, ನಾಡು ಹಾಗೂ ದೇಶಕ್ಕಷ್ಟೇ ಸೀಮಿತವಾಗದೆ, ಇಡೀ ಜಗತ್ತಿನಾದ್ಯಂತ ಶಾಂತಿ, ಸೌಹಾರ್ದ, ಪ್ರೀತಿಯ ದೀಪವಾಗಿ ನೆಲೆ ಕಂಡುಕೊಳ್ಳಲಿ ಎಂದ ಅವರು, ನಾವೆಲ್ಲರೂ ಒಂದೇ ಗಗನದ ಅಡಿಯ ಪಯಣಿಗರು. ಆಕಾಶ ಯಾರನ್ನೂ ಬೇರ್ಪಡಿಸುವುದಿಲ್ಲ. ಭೂಮಿಯು ಯಾರನ್ನೂ ಹೊರತಳ್ಳುವುದಿಲ್ಲ. ಆದರೆ ಮನುಷ್ಯರು ಮಾತ್ರ ಗಡಿಗಳನ್ನು ಸೃಷ್ಟಿಸುತ್ತಾರೆ ಎಂದರು.
‘ದಸರಾ ಎಂದರೆ ಹಬ್ಬವಷ್ಟೇ ಅಲ್ಲ. ನಾಡಿನ ನಾಡಿ ಮಿಡಿತ, ಸಂಸ್ಕೃತಿಯ ಉತ್ಸವ. ಇದು ಎಲ್ಲರನ್ನೂ ಒಳಗೊಳ್ಳುವ ಘಳಿಗೆ. ಸಮನ್ವಯ ಮೇಳ. ವಿವಿಧತೆಯಲ್ಲಿ ಏಕತೆ ಇರುವ ಸುಗಂಧ’ ಎಂದು ಬಣ್ಣಿಸಿದರು.
‘ನವರಾತ್ರಿಯಲ್ಲಿ ಉರ್ದು ಭಾಷಿಕರು ತಮ್ಮ ಗುರುತನ್ನು ಕೊಟ್ಟಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳದಲ್ಲಿ ವಾಸವಿದ್ದ ನನ್ನ ಆಪ್ತ ಸಂಬಂಧಿ ಮೊಹಮದ್ ಗೌಸ್ ಎಂಬುವವರು ಮೈಸೂರು ಮಹಾರಾಜರ ಅಂಗರಕ್ಷಕ ಪಡೆಯ ಸೈನಿಕರಾಗಿದ್ದರು. ಅಂಥ ಹಲವರು ಅಂಗರಕ್ಷಕ ಪಡೆಯಲ್ಲಿದ್ದರು. ಜಯಚಾಮರಾಜೇಂದ್ರ ಒಡೆಯರ್ ಮುಸ್ಲಿಮರನ್ನು ನಂಬಿ ಅಂಗರಕ್ಷಕ ಪಡೆಗೆ ನೇಮಿಸಿಕೊಂಡಿದ್ದರು. ಇದು ಅವಿಸ್ಮರಣೀಯವಾದ ಹೆಮ್ಮೆ’ ಎಂದು ಸ್ಮರಿಸಿದರು.
‘ನಮ್ಮ ಸಂಸ್ಕೃತಿಯು ಹೃದಯಗಳನ್ನು ಒಂದುಗೂಡಿಸುವಂಥದ್ದು, ದ್ವೇಷಗಳನ್ನು ಬೆಳೆಸುವಂಥದ್ದಲ್ಲ, ಪ್ರೀತಿಯನ್ನು ಹರಡುವಂಥದ್ದು. ಇದುವರೆಗೂ ನನ್ನ ಧರ್ಮದ ಆಚರಣೆಗಳು ನನ್ನ ಮನೆಯ ಹೊಸ್ತಿಲ ಗಡಿಯನ್ನು ದಾಟಿಲ್ಲ’ ಎಂದು ಪ್ರತಿಪಾದಿಸಿದರು.
‘ನನ್ನ ಬದುಕು ನನಗೆ ಹಲವು ಪಾಠಗಳನ್ನು ಕಲಿಸಿದೆ. ವ್ಯಷ್ಟಿಯಿಂದ ಸಮಷ್ಟಿಯತ್ತ ಸಾಗುವುದೇ ನಿಜವಾದ ದಾರಿ ಎಂಬುದು ಅದರಲ್ಲೊಂದು. ನನ್ನ ಧಾರ್ಮಿಕ ನಂಬಿಕೆ, ಜೀವನದರ್ಶನ ಜೀವಪರವಾಗಿದೆ. ಅದು ಮರದ ನೆರಳಂತೆ, ತಂಪಾದ ನದಿಯಂತೆ. ಅಸ್ತ್ರದ ಬದಲು ಅಕ್ಷರದಿಂದ, ಹಗೆಯ ಬದಲು ಪ್ರೀತಿಯಿಂದ ಗೆಲ್ಲುವಂಥದ್ದು’ ಎಂದು ಹೇಳಿದರು.








