Mysuru Dasara: ಬಾನು ಮುಷ್ತಾಕ್‌ ಉದ್ಘಾಟನೆ

ಮೈಸೂರು :

    ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ  ಇಂದು ಆರಂಭವಾಗಲಿದೆ. ಬೆಳಗ್ಗೆ 10.10 ರಿಂದ 10.40ರೊಳಗೆ ಸಲ್ಲುವ ಶುಭವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ  ಸನ್ನಿಧಿಯಲ್ಲಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.

   ಇದೇ ಮೊದಲ ಸಲ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಸಿದ್ದರಾಮಯ್ಯ ಅವರಿಗೆ ಸಿಎಂ ಆಗಿ ಇದು 8ನೇ ದಸರಾ, ಉಸ್ತುವಾರಿ ಸಚಿವರಾಗಿ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಇದು 5ನೇ ದಸರಾ ಆಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಚಾಮುಂಡಿ ಬೆಟ್ಟದ ಮಾರ್ಗದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

   ದಸರಾ ಪೂರ್ವತಯಾರಿ ಹಾಗೂ ಗಜಪಡೆ ತಾಲೀಮು ಸೇರಿದಂತೆ ಹಲವು ವಿಶೇಷಗಳನ್ನೊಳಗೊಂಡ ವಿಡಿಯೋವನ್ನು ವಾರ್ತಾ ಮತ್ತು ಪ್ರಸಾರ ಇಲಾಖೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

   ಈ ಬಾರಿಯ ದಸರಾಗೆ ಅರಮನೆ ನಗರಿ ಮೈಸೂರು ನವವಧುವಿನಂತೆ ಸಿಂಗಾರಗೊಂಡು ನಿಂತಿದೆ. ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಬೀದಿಗಳು, ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ನೋಡುಗರಿಗೆ ಉಣಬಡಿಸಲು ಎದುರುನೋಡುತ್ತಿರುವ ವೇದಿಕೆಗಳು, ತಳಿರು ತೋರಣಗಳಿಂದ ಸಿಂಗಾರಗೊಂಡ ಮೈಸೂರು ಅರಮನೆ ಹೀಗೆ ಇಡೀ ನಗರವೇ ಹೊಸರೂಪ ಪಡೆದು ಕಂಗೊಳಿಸುತ್ತಿದೆ. 

  ಮೈಸೂರು ದಸರಾದ ಆಕರ್ಷಣೆಯ ಕೇಂದ್ರ ಬಿಂದುವಾದ ಅಂಬಾರಿ ಮೆರವಣಿಗೆಗೆ ಈಗಾಗಲೇ ಭರ್ಜರಿ ತಯಾರಿ ನಡೆದಿದೆ. ತಿಂಗಳ ಹಿಂದೆಯೇ ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದ ಗಜಪಡೆ ನಿತ್ಯದ ತಾಲೀಮ ಮುಗಿಸಿ, ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿ ಹೊತ್ತು ಸಾಗಲು ಸರ್ವಸನ್ನದ್ಧಗೊಂಡಿದೆ. ಕರುನಾಡಿನ ಮನೆಮಕ್ಕಳಾಗಿರುವ ಅಭಿಮನ್ಯು – ಭೀಮನ ಜೋಡಿ ಈ ಬಾರಿಯ ಮೈಸೂರು ದಸರಾದ ಮೆರುಗು ಹೆಚ್ಚಿಸುವುದರಲ್ಲಿ ಅನುಮಾನವೇ ಇಲ್ಲ.

   ನಾಡಬಂಧುಗಳಿಗೆ ನವರಾತ್ರಿ ಹಬ್ಬದ ಶುಭಾಶಯ ಕೋರುತ್ತಾ, ದಸರಾದ ಪೂರ್ವತಯಾರಿಗಳ ಕುರಿತ ಈ ಸುಂದರ ವೀಡಿಯೋವನ್ನು ನಿಮ್ಮೆದುರು ಇಡುತ್ತಿದ್ದೇವೆ. ನೋಡಿ, ಅನಿಸಿಕೆ ಹಂಚಿಕೊಳ್ಳಿ- ಎಂದು ವಾರ್ತಾ ಇಲಾಖೆ ಪೋಸ್ಟ್‌ನಲ್ಲಿ ತಿಳಿಸಿದೆ.

Recent Articles

spot_img

Related Stories

Share via
Copy link