ಬರಗೂರು : ಕೆರೆ ಏರಿ ಒತ್ತುವರಿ ತಡೆಗೆ ಮನವಿ

 ಬರಗೂರು :

     ಜೆಸಿಬಿಯಿಂದ ಕೆರೆ ಏರಿ ರಿವಿಟ್ ತೆಗೆದು ಧ್ವಂಸಗೊಳಿಸಿ, ಅಕ್ರಮವಾಗಿ ಪೆಟ್ಟಿಗೆ ಅಂಗಡಿ ಇಡಲು ಪ್ರಯತ್ನಿಸಿದ್ದವರನ್ನು ಗ್ರಾಮಸ್ಥರು ಸಂಬಂಧಪಟ್ಟ ಮೇಲಧಿಕಾರಿಗಳಿಗೆ ತಿಳಿಸಿ ಕೆರೆ ಏರಿ ಸುರಕ್ಷತೆ ಹಾಗೂ ರಸ್ತೆ ಒತ್ತುವರಿ ಬಗ್ಗೆ ಎಚ್ಚರಿಕೆ ನೀಡಿ ಅಕ್ರಮವಾಗಿ ಪೆಟ್ಟಿಗೆ ಅಂಗಡಿ ಇಡುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದ ಘಟನೆ ಶಿರಾ ತಾಲ್ಲೂಕು ಬರಗೂರು ಗ್ರಾಮದಲ್ಲಿ ಜರುಗಿದೆ.

      ಶಿರಾ ತಾಲ್ಲೂಕು ಬರಗೂರು ಗ್ರಾಮದ ಕೆರೆ ಏರಿಯನ್ನು ಒತ್ತುವರಿ ಮಾಡಿ ಅಕ್ರಮವಾಗಿ ಜೆಸಿಬಿಯಿಂದ ರಿವಿಟ್ ತೆಗೆಯಲಾಗಿತ್ತು. ಇದನ್ನು ಗಮನಿಸಿದ ಬರಗೂರು ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಕೆರೆ ಏರಿ ಒತ್ತುವರಿ ಬಗ್ಗೆ ಪರಿಶೀಲಿಸಿ ತಡೆ ನೀಡಿದ್ದಾರೆ. ಈಗಾಗಲೇ 30 ವರ್ಷಗಳ ಹಿಂದೆ ಬರಗೂರು ಕೆರೆ ತುಂಬಿದಾಗ ಕೆರೆ ಏರಿ ಮೇಲೆ ನೀರು ಹರಿಯುವ ಹಂತಕ್ಕೆ ತಲುಪಿ, ಕೆರೆ ಏರಿ ಬಿರುಕು ಬಿಟ್ಟು, ಏರಿ ಒಡೆಯುವ ಸ್ಥಿತಿಗೆ ಬಂದಿತ್ತು.

     ಆಗ ಪ್ರಜ್ಞಾವಂತ ಹಿರಿಯರಿಂದ ಕೆರೆ ಕೋಡಿ ಪಕ್ಕದಲ್ಲಿ ನೀರು ಹೋಗುವಂತೆ ಮಾಡಿ, ಕೆರೆ ಏರಿಗೆ ಯಾವುದೆ ಹಾನಿಯಾಗದೆ ಭದ್ರತೆ ನೀಡಲಾಗಿತ್ತು. ಆದರೆ ಇತ್ತೀಚೆಗೆ ಕೆರೆ ಏರಿಗಳನ್ನು ಜೆಸಿಬಿಯಿಂದ ಧ್ವಂಸಗೊಳಿಸಿ ಅಕ್ರಮವಾಗಿ ಒತ್ತುವರಿ ಮಾಡುತ್ತಿರುವ ಪ್ರಕರಣಗಳು ಎದುರಾಗಿವೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೆರೆಗಳ ಅಭಿವೃದ್ಧಿ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಕಣ್ಣು ಮುಚ್ಚಿ ಕುಳಿತಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

      ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಸಂಬಂಧಪಟ್ಟ ಕಂದಾಯ ಇಲಾಖೆ ಮತ್ತು ಪಂಚಾಂಯತ್ ಇಲಾಖೆ ಅಧಿಕಾರಿಗಳು ಕೂಡಲೆ ಸ್ಥಳಕ್ಕೆ ಬಂದು ಪರಿಶೀಲಿಸಿ, ಕೆರೆ ನಿರ್ವಹಣೆ ಬಗ್ಗೆ ಎಚ್ಚರಿಕೆ ವಹಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap