ಬಣ್ಣ ಕಾಣದ ಬರಗೂರು  ಬಯಲು ರಂಗಮಂದಿರ

ಶಿರಾ:


 ಶಿರಾ ನಗರದ ಹೃದಯ ಭಾಗದಲ್ಲಿನ ರಂಗ ಮಂದಿರವನ್ನೇ ಮರೆತ ತಾಲ್ಲೂಕು ಆಡಳಿತ

ತಾಲ್ಲೂಕಿನ ಬಯಲು ಸೀಮೆಯಲ್ಲಿ ಹುಟ್ಟಿ, ಬೆಳೆದು ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿಕೊಂಡು ಕೇವಲ ತಾಲ್ಲೂಕು, ಜಿಲ್ಲೆಗಷ್ಟೇ ಅಲ್ಲದೇ ರಾಜ್ಯ ಹಾಗೂ ದೇಶಕ್ಕೂ ಉತ್ತಮ ಹೆಸರು ತಂದು ಕೊಟ್ಟ ಬರಗೂರು ರಾಮಚಂದ್ರ ಶಿರಾ ತಾಲ್ಲೂಕಿನವರು ಎಂಬ ಹೆಮ್ಮೆ ನಿಜಕ್ಕೂ ಈ ಭಾಗದ ಎಲ್ಲರ ಮನದಾಳದಲ್ಲಿ ಹಾಸು ಹೊಕ್ಕಾಗಿ ಸೇರಿಕೊಂಡಿದೆ.

ಬರಗೂರು ರಾಮಚಂದ್ರಪ್ಪ ಶಿರಾ ಭಾಗದ ಬಯಲು ಸೀಮೆಗೆ ಬಂದಿದ್ದಾರೆಂಬ ಮಾಹಿತಿ ತಿಳಿದೊಡನೆ ಅನೇಕ ಮಂದಿ ಅವರನ್ನು ಮಾತನಾಡಿಸಲೆಂದೇ ಅವರ ಬೆನ್ನಿಗೆ ಬಿದ್ದು, ಅರೆ ಕ್ಷಣ ಅವರೊಂದಿಗೆ ವಿವಿಧ ವಿಚಾರಗಳ ವಿನಿಮಯ ಮಾಡಿಕೊಂಡು ತೃಪ್ತಿ ಪಡುವಂತಹ ಸಂದರ್ಭಗಳು ಸಾಕಷ್ಟಿವೆ.

ಇಂತಹ ಹೆಮ್ಮೆಯ ಬರಗೂರು ರಾಮಚಂದ್ರ ಅವರ ಹೆಸರಲ್ಲಿ ಶಿರಾ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಮುಂಭಾಗದ ಸರ್ಕಾರಿ ಶಾಲಾ ಆವರಣದಲ್ಲಿ ನಿರ್ಮಾಣಗೊಂಡ ಸುಸಜ್ಜಿತವಾದ ಬಯಲು ರಂಗಮಂದಿರವೊಂದು ಹತ್ತಾರು ವರ್ಷಗಳಿಂದಲೂ ಸುಣ್ಣ, ಬಣ್ಣವನ್ನೂ ಕಾಣದೆ, ಸಭೆ, ಸಮಾರಂಭಗಳ ವಾಸನೆಯನ್ನೂ ಕಾಣದೆ ಬಿಸಿಲಿಗೆ ಮೈಯೊಡ್ಡಿ ಬಳಲಿ ಬೆಂಡಾಗುತ್ತಿದ್ದರೂ ತಾಲ್ಲೂಕು ಆಡಳಿತ ಇತ್ತ ಕಡೆ ಕಣ್ಣೆತ್ತಿಯೂ ನೋಡದಂತಾಗಿದೆ.

ಆಗ 1990-91 ರಲ್ಲಿ ಶಾಸಕ ಬಿ.ಸತ್ಯನಾರಾಯಣ್ ಸಚಿವರಾಗಿದ್ದರು. ಇದೇ ಸಂದರ್ಭದಲ್ಲಿ ಡಾ.ಚಿಕ್ಕಣ್ಣ ಯಣ್ಣೇಕಟ್ಟೆ, ಬೂವನಹಳ್ಳಿ ನಾಗರಾಜ್, ರಂಗಸ್ವಾಮಯ್ಯ ಸೇರಿದಂತೆ ಅನೇಕ ಪ್ರಮುಖರು ಹಾಗೂ ರಂಗ ಕಲಾವಿದರು ಒಗ್ಗೂಡಿ ಎರಡು ದಿನಗಳ ರಾಜ್ಯ ಮಟ್ಟದ ಗಡಿನಾಡ ಜಾನಪದ ಸಮ್ಮೇಳನವನ್ನು ಆಯೋಜಿಸಿದ್ದರು. ಈ ಸಮ್ಮೇಳನದಲ್ಲಿ ಅನೇಕ ಪ್ರತಿಭಾವಂತ ಕಲಾವಿದರು ಪ್ರದರ್ಶನ ನೀಡಿ ಪ್ರಶಸ್ತಿ ಪತ್ರಗಳನ್ನು ಪಡೆದು ರಂಗ ಕಲಾವಿದರ ಮಾಸಾಶನ ಪಡೆಯಲು ಕೂಡ ಕಾರಣವಾಯಿತು.

ಸಮ್ಮೇಳನದ ಉದ್ಘಾಟನೆಯಲ್ಲಿ ಬರಗೂರು ರಾಮಚಂದ್ರಪ್ಪ ಅವರನ್ನು ವಿಶೇಷ ಆಹ್ವಾನಿತರನ್ನಾಗಿ ಆಹ್ವಾನಿಸಿ ಅಭಿನಂದಿಸಲಾಗಿತ್ತು. ಜಿಲ್ಲೆಯ ಹಾಗೂ ರಾಜ್ಯದ ರಂಗ ಕಲಾವಿದರನ್ನು ಕರೆಸಿ ಅಭಿನಂದಿಸುವುದರ ಜೊತೆಗೆ ಬರಗೂರರನ್ನು ವಿಶೇಷವಾಗಿ ಅಭಿನಂದಿಸಲಾಗಿತ್ತು. ಅಭಿನಂದನೀಯ ಕ್ಷಣಗಳು ಮುಗಿದ ನಂತರ ಸಚಿವರಾಗಿದ್ದ ದಿ.ಬಿ.ಸತ್ಯನಾರಾಯಣ್ ಅಧ್ಯಕ್ಷೀಯ ಭಾಷಣ ಮಾಡಿ ಮಾತನಾಡಿ, ನಗರದ ಪ್ರಮುಖ ರಸ್ತೆಗೆ ಬರಗೂರು ರಾಮಚಂದ್ರಪ್ಪ ಅವರ ಹೆಸರಿಡುವುದಾಗಿ ಘೋಷಿಸಿದ್ದರು.

ಸಚಿವರ ಭಾಷಣದ ನಂತರ ಯಾವುದೇ ರಸ್ತೆ ವೃತ್ತಗಳಿಗೆ ನನ್ನ ಮೀಸಲಿಡಬೇಡಿ ಅದಾವುದೂ ಬೇಡ ಎಂದು ಸಚಿವರಲ್ಲಿ ಬರಗೂರು ವಿನಮ್ರ ಮನವಿ ಮಾಡಿದ್ದರು. ರಸ್ತೆಗೆ ನಾಮಕರಣ ಮಾಡುವುದು ಬೇಡ. ಈಗ ಸಮಾರಂಭ ನಡೆಯುತ್ತಿರುವ ಸ್ಥಳದಲ್ಲಿಯೇ ಒಂದು ರಂಗ

ಮಂದಿರವನ್ನು ತಮ್ಮ ಹೆಸರಲ್ಲಿ ನಿರ್ಮಾಣ ಮಾಡಲಾದರೂ ಒಪ್ಪಿಕೊಳ್ಳಿ ಎಂದು ಸತ್ಯನಾರಾಯಣ್ ಭಿನ್ನವಿಸಿಕೊಂಡಾಗ ಬರಗೂರರು ಒಪ್ಪಿಕೊಳ್ಳುವ ಅನಿವಾರ್ಯತೆಯೂ ಬಂದಿತ್ತು.

ಅತ್ತ ಒಂದೆರಡು ತಿಂಗಳಲ್ಲಿಯೇ ದಿ.ಬಿ.ಸತ್ಯನಾರಾಯಣ್ ಶಿರಾ ನಗರದಲ್ಲಿ ಬರಗೂರು ರಾಮಚಂದ್ರ ಅವರ ಹೆಸರಿನ ಬಯಲು ರಂಗ ಮಂದಿರ ನಿರ್ಮಾಣಕ್ಕೆ ಮುಂದಾದರು. ಲಕ್ಷಾಂತರ ರೂ. ವೆಚ್ಚದ ಬಯಲು ರಂಗ ಮಂದಿರದ ನಿರ್ಮಾಣ ಸಂದರ್ಭದಲ್ಲಿ ತಮ್ಮ ಮನೆಯನ್ನು ಕಟ್ಟಿಸುವಂತೆ ಕಾಮಗಾರಿಯ ಮುಂದೆ ನಿಂತು ರಂಗ ಮಂದಿರದ ನಿರ್ಮಾಣಕ್ಕೆ ಸತ್ಯನಾರಾಯಣ್ ಮುಂದಾಗಿದ್ದರು.

ಗುಣಮಟ್ಟದ ಕಾಮಗಾರಿ ಕಾಣದಿದ್ದಾಗ ಗುತ್ತಿಗೆದಾರರನ್ನು, ಎಂಜಿನಿಯರ್‍ಗಳನ್ನು ತರಾಟೆಗೆ ತೆಗೆದುಕೊಂಡು ಗುಣಮಟ್ಟದ ರಂಗ ಮಂದಿರ ನಿರ್ಮಾಣ ಮಾಡುವಲ್ಲಿ ದಿ.ಸತ್ಯನಾರಾಯಣ್ ಯಶಸ್ಸು ಕಂಡರು. ಹಲವು ವರ್ಷಗಳವರೆಗೆ ಇದೇ ರಂಗ ಮಂದಿರದಲ್ಲಿ ಸಭೆಗಳು, ಸಮಾರಂಭಗಳು, ನಾಟಕಗಳು ದಿನನಿತ್ಯವೂ ನಡೆಯುವ ಮೂಲಕ ಇಡೀ ಶಿರಾ ನಗರದ ಜನ ರಂಗ ಕಲೆಯ ಬಗ್ಗೆ ಆಸಕ್ತಿ ಮೂಡಲು ಕಾರಣವಾಗಿತ್ತು.

ನಗರಸಭೆಯ ಜವಾಬ್ದಾರಿಗೆ ವಹಿಸಿದರೆ ಎಲ್ಲಿ ಯಡವಟ್ಟಾಗಿ ಬರಗೂರರ ಹೆಸರಿನ ರಂಗ ಮಂದಿರ ಕಳೆದು ಹೋಗಿ ಬಿಡುತ್ತದೆಯೋ ಎಂದು ಭಾವಿಸಿ ಸದರಿ ರಂಗ ಮಂದಿರದ ನಿರ್ವಹಣೆಯ ಜವಾಬ್ದಾರಿಯನ್ನು ತಾಲ್ಲೂಕು ಪಂಚಾಯ್ತಿಗೆ ನೀಡಲಾಗಿತ್ತು. ರಂಗ ಮಂದಿರದ ಸಂಪೂರ್ಣ ಜವಾಬ್ದಾರಿ ತಾ.ಪಂ. ಇಲಾಖೆಯೇ ನಿರ್ವಹಣೆ ಮಾಡುತ್ತಿತ್ತು.

ನಾಟಕ, ಸಭೆ, ಸಮಾರಂಭಗಳಿಂದ ತುಂಬಿ ತುಳುಕುತ್ತಿದ್ದ ಬರಗೂರು ರಾಮಚಂದ್ರಪ್ಪ ಬಯಲು ರಂಗ ಮಂದಿರ ಇದೀಗ ಸುಣ್ಣ, ಬಣ್ಣವನ್ನೂ ಕಾಣದೆ, ಸಭೆ-ಸಮಾರಂಭಗಳೂ ನಡೆಯದೆ ಇಡೀ ತಾಲ್ಲೂಕು ಆಡಳಿತದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸರ್ಕಾರಿ ಕಾಲೇಜಿನ ಕೊಠಡಿಗಳ ನಿರ್ಮಾಣ,

ಶಾಲಾ ಆವರಣದಲ್ಲಿ ನಡೆಯುತ್ತಿರುವ ಕೆಲ ಕಾಮಗಾರಿಗಳ ಜಲ್ಲಿಕಲ್ಲು, ಮರಳು ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಬಳಸುವ ಆವರಣವನ್ನಾಗಿ ಮಾಡಿಕೊಂಡು ರಂಗ ಮಂದಿರವನ್ನು ನಿಧಾನಗತಿಯಲ್ಲಿ ಜನರೆ ಮರೆಯುವಂತಹ ವಾತಾವರಣವನ್ನು ತಾಲ್ಲೂಕು ಆಡಳಿತವೇ ಸೃಷ್ಟಿ ಮಾಡುತ್ತಿರುವದು ನಿಜಕ್ಕೂ ಸೋಜಿಗದ ಸಂಗತಿಯೇ ಸರಿ.

ಕ್ಷೇತ್ರದ ಶಾಸಕರು ತಾಲ್ಲೂಕಿನ ಬಹುತೇಕ ಸರ್ಕಾರಿ ಶಾಲೆಗಳಿಗೆ ಸುಣ್ಣ, ಬಣ್ಣವನ್ನು ಬಳಿಸುವ ಕೆಲಸ ಮಾಡುತ್ತಿದ್ದು, ಕನಿಷ್ಠ ಪಕ್ಷ ಶಾಸಕರ ಕಣ್ಣಿಗೆ ಸುಣ್ಣ, ಬಣ್ಣವನ್ನೇ ಕಾಣದ ಬರಗೂರು ರಾಮಚಂದ್ರಪ್ಪ ಅವರ ಹೆಸರಿನ ಈ ಬಯಲು ರಂಗ ಮಂದಿರ ಕಣ್ಣಿಗೆ ಕಂಡಿಲ್ಲವೇ?ಸಭೆ, ಸಮಾರಂಭಗಳೇ ನಡೆಯದೆ ಅನಾಥ ಪ್ರಜ್ಞೆಯಲ್ಲಿರುವ ಈ ರಂಗ ಮಂದಿರದ ಚಟುವಟಿಕೆಯನ್ನು ಕ್ರಿಯಾಶೀಲಗೊಳಿಸುವಂತಹ ಕೆಲಸವನ್ನು ಕ್ಷೇತ್ರದ ಶಾಸಕರು ಮಾಡಬಲ್ಲರೆ ಎಂಬುದನ್ನು ಕಾದು ನೋಡಬೇಕಿದೆ.

ಗುಣಮಟ್ಟದ ಕಾಮಗಾರಿ ಕಾಣದಿದ್ದಾಗ ಗುತ್ತಿಗೆದಾರರನ್ನು, ಎಂಜಿನಿಯರ್‍ಗಳನ್ನು ತರಾಟೆಗೆ ತೆಗೆದುಕೊಂಡು ಗುಣಮಟ್ಟದ ರಂಗ ಮಂದಿರ ನಿರ್ಮಾಣ ಮಾಡುವಲ್ಲಿ ದಿ.ಸತ್ಯನಾರಾಯಣ್ ಯಶಸ್ಸು ಕಂಡರು. ಹಲವು ವರ್ಷಗಳವರೆಗೆ ಇದೇ ರಂಗ ಮಂದಿರದಲ್ಲಿ ಸಭೆಗಳು, ಸಮಾರಂಭಗಳು, ನಾಟಕಗಳು ದಿನನಿತ್ಯವೂ ನಡೆಯುವ ಮೂಲಕ ಇಡೀ ಶಿರಾ ನಗರದ ಜನ ರಂಗ ಕಲೆಯ ಬಗ್ಗೆ ಆಸಕ್ತಿ ಮೂಡಲು ಕಾರಣವಾಗಿತ್ತು.

ಕ್ಷೇತ್ರದ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಅವರು ತಾಲ್ಲೂಕಿನ ಬಹುತೇಕ ಸರ್ಕಾರಿ ಶಾಲೆಗಳಿಗಳಿಗೆ ಸುಣ್ಣ, ಬಣ್ಣವನ್ನು ಬಳಿಸುವ ಕೆಲಸ ಮಾಡುತ್ತಿದ್ದು ಕನಿಷ್ಠ ಪಕ್ಷ ಶಾಸಕರ ಕಣ್ಣಿಗೆ ಸುಣ್ಣ, ಬಣ್ಣವನ್ನೇ ಕಾಣದ ಬರಗೂರು ರಾಮಚಂದ್ರಪ್ಪ ಅವರ ಹೆಸರಿನ ಈ ಬಯಲು ರಂಗ ಮಂದಿರ ಕಣ್ಣಿಗೆ ಕಂಡಿಲ್ಲವೇ?

          – ಬರಗೂರು ವಿರೂಪಾಕ್ಷ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap