ಬರಗೂರು : ಸಂತ್ರಸ್ತರಿಗೆ 15 ಕುರಿಮರಿ ವಿತರಿಸಿದ ಶಾಸಕ

 ಬರಗೂರು :

      ಹುಲಿಕುಂಟೆ ಹೋಬಳಿ ಬರಡು ಪ್ರದೇಶವಾಗಿದ್ದು ಕುರಿಗಾರರು ಹೊಲಗಳಲ್ಲಿ ಅಲೆದು ಕುರಿಗಳನ್ನು ಮೇಯಿಸಿ ಜೀವನ ನಡೆಸುವುದು ತುಂಬಾ ಕಷ್ಟದ ಕೆಲಸ. ಆದರೂ 22ಕುರಿಗಳು ಜೋಳದ ಚಿಗುರು ತಿಂದು ಮೃತಪಟ್ಟಿರುವುದು ನೋವಿನ ಸಂಗತಿ, ಇವರ ಕುಟುಂಬಕ್ಕೆ ಸ್ವ ಇಚ್ಛೆಯಿಂದ 15 ಕುರಿಮರಿಗಳನ್ನು ಹಸ್ತಾಂತರಿಸುತ್ತಿದ್ದು, ಕುರಿಗಾರರು ಎಚ್ಚರಿಕೆಯಿಂದ ಕುರಿಗಳನ್ನು ಮೇಯಿಸುವಂತೆ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಸಲಹೆ ನೀಡಿದರು.

      ಶಿರಾ ತಾಲ್ಲೂಕು ಹುಲಿಕುಂಟೆ ಹೋಬಳಿಯ ದೊಡ್ಡಬಾಣಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಓಬಳಾಪುರ ಗ್ರಾಮದಲ್ಲಿ ಜಯಣ್ಣ ಹಾಗೂ ಹನುಮಂತಪ್ಪ ಎಂಬುವರಿಗೆ ಸೇರಿದ 22 ಕುರಿಗಳು ಜ.1ರಂದು ಚಿಗುರು ಜೋಳದ ಸೆಪ್ಪೆ ತಿಂದು ಮೃತಪಟ್ಟಿದ್ದವು. ಶಾಸಕ ಡಾ.ರಾಜೇಶ್‍ಗೌಡ ಸರ್ಕಾರದಿಂದ ಬರುವಂತಹ ಪರಿಹಾರ ಒದಗಿಸುವಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಕುರಿ ಮಾಲೀಕರಿಗೆ ಧೈರ್ಯ ತುಂಬಿದ್ದರು. ಸೋಮವಾರ ಹಠಾತ್ತನೆ ಭೇಟಿ ನೀಡಿದ ಶಾಸಕ ಓಬಳಾಪುರ ಗ್ರಾಮದ ಜಯಣ್ಣ, ಹನುಮಂತಪ್ಪ ಕುಟುಂಬಕ್ಕೆ 15 ಹೆಣ್ಣು ಕುರಿ ಮರಿಗಳನ್ನು ವೈಯಕ್ತಿಕವಾಗಿ ಹಸ್ಥಾಂತರಿಸಿ ಮಾನವೀಯತೆ ತೋರಿದ್ದಾರೆ

      ಇದೇ ವೇಳೆ ಮಾತನಾಡಿದ ಅವರು, ಆಕಸ್ಮಿಕವಾಗಿ ಕುರಿಗಳು ಜೋಳದ ಚಿಗುರು ತಿಂದು ಸಾವನ್ನಪ್ಪಿರುವುದು ಕುರಿಗಾರರ ಕುಟುಂಬಕ್ಕೆ ತುಂಬಾ ನಷ್ಟವಾಗಿರುವುದನ್ನು ಗಮನಿಸಿದ್ದೇವೆ. ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ನಲ್ಲಿ ಸಂತ್ರಸ್ತರಿಗೆ ಪರಿಹಾರ ಒದಗಿಸುವಂತೆ ತಾಲ್ಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲಿ ತಿಳಿಸಲಾಗಿದೆ.

      ಜಿಲ್ಲಾಡಳಿತದಿಂದಲೂ ಸಹ ಪರಿಹಾರ ಒದಗಿಸಲು ಪ್ರಯತ್ನಿಸುತ್ತೇನೆ. ಮೃತಪಟ್ಟ ಕುರಿಗಳಿಗೆ ತಲಾ 5 ಸಾವಿರ ರೂ. ಪರಿಹಾರ ಕೊಡುವಂತಿತ್ತು. ಕಾರಣಾಂತರಗಳಿಂದ ಸರ್ಕಾರ ತಾತ್ಕಾಲಿಕವಾಗಿ ಈ ಸೌಲಭ್ಯ ನಿಲ್ಲಿಸಿದೆ. ಕೆಲವು ನ್ಯೂನತೆಗಳನ್ನು ಸರಿಪಡಿಸಿ ಮತ್ತೆ ಪರಿಹಾರ ನೀಡುವ ವ್ಯವಸ್ಥೆಯನ್ನು ಮಾಡುತ್ತದೆ. ಈಗ ನಾನು ವೈಯಕ್ತಿಕವಾಗಿ ಸಂತ್ರಸ್ತ ಕುಟುಂಬಕ್ಕೆ 15 ಹೆಣ್ಣು ಕುರಿಮರಿಗಳನ್ನು ನೀಡುತ್ತಿದ್ದೇನೆ ಎಂದರು.

      ಗ್ರಾಮದ ಮುಖಂಡರಾದ ವೀರಣ್ಣ, ಸಣ್ಣೀರಪ್ಪ, ರಂಗನಾಯ್ಕ, ಪ್ರಕಾಶ್ ಗೌಡ, ಸತೀಶ್‍ಗೌಡ, ಈರಣ್ಣ, ಪೂಜಾರ್ ಕಾಂತಪ್ಪ, ಗ್ರಾಪಂ ಸದಸ್ಯರಾದ ಕರಿಯಮ್ಮ, ಶ್ರೀಧರ್, ತಾ.ಪಂಚಾಯತ್ ಮಾಜಿ ಸದಸ್ಯ ರಾಮಣ್ಣ ಇತರರಿದ್ದರು.

Recent Articles

spot_img

Related Stories

Share via
Copy link