ಬರಗೂರು :
ಶಿರಾ ತಾಲ್ಲೂಕು ಹುಲಿಕುಂಟೆ ಹೋಬಳಿ ವ್ಯಾಪ್ತಿಯ ಗೋಣಿಹಳ್ಳಿ ಗ್ರಾಮದಲ್ಲಿ ಶಿವರಾಜ್(29) ಎಂಬ ಯುವಕ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿರುವ ದುರ್ಘಟನೆ ಬುಧವಾರ ಸಂಭವಿಸಿದೆ. ಈ ಮೂಲಕ ಇದುವರೆಗೂ ಗೋಣಿಹಳ್ಳಿ ಗ್ರಾಮದಲ್ಲೆ ಒಟ್ಟು ಮೂರು ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆಂದು ತಿಳಿದು ಬಂದಿದೆ.
ಮೃತ ಯುವಕ ಶಿವರಾಜ್ ಸೋಮವಾರ ಬರಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಲ್ಲಿ ಕೊರೊನಾ ಪರೀಕ್ಷೆಗೊಳಪಟ್ಟಿದ್ದರು. ಮಂಗಳವಾರ ಯುವಕನಿಗೆ ಇದ್ದಕ್ಕಿದ್ದಂತೆ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಯುವಕನನ್ನು ಶಿರಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಯುವಕ ಬುಧವಾರ ಬೆಳಗಿನ ಜಾವ ಸಾವನ್ನಪ್ಪಿದ್ದಾರೆÉಂದು ತಿಳಿದು ಬಂದಿದೆ. ಕಳೆದ ಒಂದು ವಾರದಿಂದಷ್ಟೆ ಇದೇ ಗ್ರಾಮದಲ್ಲಿ ಓರ್ವಯುವಕ ಹಾಗೂ ಓರ್ವ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದರು. ಇದೀಗ ಮತ್ತೊಬ್ಬ ಯುವಕ ಸೇರಿದಂತೆ ಗೋಣಿಹಳ್ಳಿ ಗ್ರಾಮದಲ್ಲಿ ಒಟ್ಟು ಕೊರೊನಾ ಸೋಂಕಿಗೆ ಮೂರು ಮಂದಿ ಬಲಿಯಾಗಿರುವುದು ದುದ್ರ್ಯೈವದ ಸಂಗತಿಯಾಗಿದೆ. ಮೇಲ್ಕಂಡ ಇಬ್ಬರು ಯುವಕರು ರೋಗ ಲಕ್ಷಣಗಳು ಕಂಡ ತಕ್ಷಣವೇ ವೈದ್ಯರಲ್ಲಿ ಪರೀಕ್ಷಿಸಿ ಚಿಕಿತ್ಸೆ ಪಡೆದಿದ್ದರೆ ಯಾವುದೇ ಸಾವು ಸಂಭವಿಸುತ್ತಿರಲಿಲ್ಲ. ಜನರು ನಾಚಿಕೆ, ಅವಮಾನ, ಭಯದಿಂದಾಗಿ ಆಸ್ಪತ್ರೆಗೆ ಹೋಗದೆ ಮನೆಯಲ್ಲೇ ಇದ್ದು ಚಿಕಿತ್ಸೆಗೆ ತಡ ಮಾಡುವುದರಿಂದ ಇಂತಹ ದುರ್ಘಟನೆಗಳು ನಡೆಯುತ್ತಿರುವುದು ಗೋಚರವಾಗುತ್ತಿದೆ.
ಗೋಣಿಹಳ್ಳಿ ಗ್ರಾಮದಲ್ಲಿ ಇದುವರೆಗೂ ಒಟ್ಟು 31 ಪಾಸಿಟೀವ್ ಕೇಸುಗಳು ದಾಖಲಾಗಿದ್ದು, ಮೈಕ್ರೋ ಕಂಟೈನ್ಮೆಂಟ್ ಝ್ಹೋನ್ ಎಂದು ಗುರುತಿಸಲಾಗಿದೆ. 20 ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇನ್ನುಳಿದ 10 ಸೋಂಕಿತರು ಹೋಂ ಐಸೋಲೇಷನ್‍ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಿರಿಯ ಆರೋಗ್ಯ ಸಹಾಯಕ ಮನುಕಿರಣ್, ಪೋಲೀಸ್ ಪೇದೆ ಸಂಜುಕುಮಾರ್, ಪಂಚಾಯ್ತಿ ಬಿಲ್ ಕಲೆಕ್ಟರ್ ಗಂಗಣ್ಣ ಮೃತ ಯುವಕನ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ