ಬರಗೂರು :
ನೊಳಂಬರ ಕಾಲದ ಬರಗೂರಿನ ಇತಿಹಾಸ ಪ್ರಸಿದ್ಧ ಶ್ರೀ ಈಶ್ವರ ದೇವಸ್ಥಾನ ಜೀರ್ಣೋದ್ಧಾರ ಕಾರ್ಯದ ಜೊತೆಗೆ ಶ್ರೀ ವೀರಭದ್ರಸ್ವಾಮಿ ದೇವರ ನೂತನ ದೇವಾಲಯ ನಿರ್ಮಾಣ ಮಾಡಲು ಮುಂದಾಗಿರುವ ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿ ಭೂಮಿ ಪೂಜೆ ನೆರವೇರಿಸಿದರು.
ಶಿರಾ ತಾಲ್ಲೂಕು ಬರಗೂರಿನ ನೊಳಂಬರ ಕಾಲದ ಇತಿಹಾಸ ಪ್ರಸಿದ್ಧ ಶ್ರೀ ಈಶ್ವರ ದೇವಸ್ಥಾನ ಜೀರ್ಣೋದ್ಧಾರ ಕಾರ್ಯವು ಶ್ರೀಕ್ಷೇತ್ರ ಧರ್ಮಸ್ಥಳ ಧಮೋತ್ಥಾನ ಟ್ರಸ್ಟ್ ಹಾಗೂ ದೇವಸ್ಥಾನ ಸಮಿತಿ ಮತ್ತು ಸಾರ್ವಜನಿಕರ ಸಹಕಾರದಿಂದ ಸುಮಾರು 44 ಲಕ್ಷ ರೂ. ವೆಚ್ಚದಲ್ಲಿ ಪುನರ್ಮಿರ್ಮಾಣಗೊಳ್ಳುತ್ತಿದೆ. ಈ ದೇವಸ್ಥಾನ ನೂರಾರು ವರ್ಷಗಳ ಹಳೆಯದಾಗಿದ್ದು ಶಿಥಿಲಾವಸ್ಥೆಯಲ್ಲಿತ್ತು. ದೇವಸ್ಥಾನ ಜೀರ್ಣೋದ್ಧಾರಕ್ಕೆ ಹಲವಾರು ತೊಡಕುಗಳಿದ್ದವು. ಹೋಮ-ಹವನ ಇತ್ಯಾದಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಜೊತೆಗೆ ದೇವಸ್ಥಾನದ ಬಲಭಾಗದಲ್ಲಿ ಶ್ರೀವೀರಭದ್ರಸ್ವಾಮಿ ದೇವಸ್ಥಾನ ನಿರ್ಮಾಣ ಮಾಡಲು ಸಂಕಲ್ಪ ಮಾಡಿದರೆ ಶ್ರೀ ಈಶ್ವರ ದೇವಾಲಯ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿ ನೆರವೇರುತ್ತದೆ ಎಂಬ ಶಾಸ್ತ್ರದಂತೆ ಮುಂದಾಗಲಾಗಿ, ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗಿದೆ. ಆದರೂ ಇತ್ತೀಚಿನ ಒಂದೂವರೆ ವರ್ಷದಿಂದ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ದೇವಸ್ಥಾನ ಕಾರ್ಯ ಕುಂಠಿತಗೊಂಡಿದೆ. ರಾಜಕೀಯ ಮುಖಂಡರಾದ ಕಲ್ಕೆರೆ ರವಿಕುಮಾರ್ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ನಿರ್ಮಾಣ ಮಾಡಿಸಿ ಕೊಡಲು ಮುಂದಾಗಿದ್ದಾರೆ. ಶ್ರೀ ವರಮಹಾಲಕ್ಷ್ಮಿ ವೃತಾಚರಣೆಯ ಶುಭ ಶುಕ್ರವಾರದಂದು ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ದೇವಸ್ಥಾನ ಸಮಿತಿ ಹಾಗೂ ಸಾರ್ವಜನಿಕರು ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಶೀಘ್ರವಾಗಿ ಪೂರ್ಣಗೊಂಡು ಲೋಕಾರ್ಪಣೆಯಾಗಲೆಂದು ಭೂಮಿ ಪೂಜೆ ನೆರವೇರಿಸಿದರು.
ಶ್ರೀ ಈಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಹಲುಗುಂಡೇಗೌಡ, ಉಪಾಧ್ಯಕ್ಷರಾದ ಮುದ್ದುಕೃಷ್ಣೇಗೌಡ, ವೀರಭದ್ರಸ್ವಾಮಿ, ಕಾರ್ಯದರ್ಶಿ ಬಿ.ಎಲ್.ಮಂಜುನಾಥ್, ಖಜಾಂಚಿ ರೇಣುಕಾ ಪ್ರಸಾದ್, ಸದಸ್ಯರಾದ ಬಿ.ಸಿ.ಬಸವರಾಜು, ಬಿ.ಎಸ್ ಸಿದ್ದೇಶ್, ಬಿ.ಸಿ.ಸತೀಶ್, ಎಂ.ಎನ್ ನಾಗರಾಜು, ಬಿ.ಎಸ್.ಸತೀಶ್, ಮಂಜುನಾಥ್, ರಾಧಾ ಕೃಷ್ಣ, ಶೇಖರ್, ಕೃಷ್ಣಪ್ಪ, ರಂಗದಾಸಪ್ಪ, ನರಸಿಂಹಯ್ಯ, ನಾರಾಯಣಪ್ಪ, ನಟರಾಜು, ಬೀರಲಿಂಗಪ್ಪ, ಪುಟ್ಟಣ್ಣ, ರಂಗನಾಥ್, ರವಿಕುಮಾರ್, ಅರ್ಚಕರಾದ ಶಿವಕುಮಾರ್, ಚಿಕ್ಕರುದ್ರಪ್ಪ ಸೇರಿದಂತೆ ಹಲವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ