ಬರಗೂರು : ಜಿಲ್ಲಾ ಕಸಾಪ ಚುನಾವಣೆಯಲ್ಲಿ ಸ್ಪರ್ಧೆ

 ಬರಗೂರು : 

      ಮೂಲಭೂತ ಸೌಕರ್ಯಗಳಾದ ರಸ್ತೆ, ರೈಲು, ನೀರಿಗಾಗಿ ಜೆಲ್ಲೆಯಾದ್ಯಂತ ಪ್ರತಿಭಟನೆಗಳು, ಹೋರಾಟಗಳನ್ನು ಮಾಡುವ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್‍ನ ತಾಲ್ಲೂಕು ಅಧ್ಯಕ್ಷನಾಗಿ ಸೇವೆ ಸಲ್ಲಿಸಿ, ಬರಗೂರು ರಾಮಚಂದ್ರಪ್ಪರವರ ಅಧ್ಯಕ್ಷತೆಯಲ್ಲಿ ಇತಿಹಾಸ ನಿರ್ಮಿಸುವಂತಹ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದೇನೆ. ಸಾಹಿತ್ಯದ ಅರಿವು ಮೂಡಿಸಲು ಜಿಲ್ಲೆಯಾದ್ಯಂತ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅಪೇಕ್ಷಿತನಾಗಿದ್ದು, ಸಾಹಿತ್ಯ ಪರಿಷತ್ ಸದಸ್ಯರು ನನ್ನನ್ನು ಬೆಂಬಲಿಸಿ ಚುನಾಯಿಸುವಂತೆ ಸಾಮಾಜಿಕ ಹೋರಾಟಗಾರ ಹಾಗೂ ತಾಲ್ಲೂಕು ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಆರ್.ವಿ.ಪುಟ್ಟಕಾಮಣ್ಣ ಮನವಿ ಮಾಡಿದರು.

      ಶಿರಾ ತಾಲ್ಲೂಕು ಬರಗೂರು ಶ್ರೀ ಆಂಜನೇಯಸ್ವಾಮಿ ಗ್ರಾಮಾಂತರ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಟಿಯಲ್ಲಿ ಅವರು ಮಾತನಾಡಿದರು. ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಕೇಂದ್ರ ಕಸಾಪ ಸದಸ್ಯರು ಬೆಂಬಲಿಸಿ ಆಯ್ಕೆ ಮಾಡುವಂತೆ ಮನವಿ ಮಾಡಿದರು.

      ಶಿರಾ ತಾಲ್ಲೂಕಿನ ಬರಗೂರು ಆಂಜನೇಯಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿ ನಿವೃತ್ತನಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. 2008 ರಿಂದ 2012 ರವರೆಗೆ ಶಿರಾ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿ, ಗ್ರಾಮಾಂತರ ಪ್ರದೇಶಗಳ ರಾಜ್ಯದ ಗಡಿ ಪ್ರದೇಶಗಳಲ್ಲಿ ಸಾಹಿತ್ಯ ಪರಿಷತ್‍ನ ಹಲವಾರು ಕಾರ್ಯಕ್ರಮಗಳನ್ನು ಮಾಡಿ, ಕನ್ನಡ ಶಾಲೆಗಳು ಹಾಗೂ ಕನ್ನಡದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟಿದ್ದೇನೆ. ರಾಜ್ಯದಲ್ಲಿ ದಮಕ ಕಾರ್ಯಕ್ರಮ, ಸಂಸ್ಥಾಪನಾ ದಿನಾಚರಣೆ, ಭಗವದ್ಗೀತ ಅಭಿಯಾನ, ಕನ್ನಡ ಗಡಿನಾಡ ಜಾಗೃತಿ ಸಮಾವೇಶ ಹಾಗೂ ಬಹು ಮುಖ್ಯವಾಗಿ ತುಮಕೂರು ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾಡೋಜ ಬರಗೂರು ರಾಮಚಂದ್ರಪ್ಪರವರ ಅಧ್ಯಕ್ಷತೆಯಲ್ಲಿ ಶಿರಾ ನಗರದಲ್ಲಿ ಆಯೋಜಿಸಲಾಗಿತ್ತು. ಇದು ಅರ್ಥಪೂರ್ಣವಾದ ಸಮ್ಮೇಳನವಾಗಿದ್ದು, ಅನೇಕ ಸಾಹಿತಿಗಳು, ಕಲಾವಿದರು, ಚಿಂತಕರನ್ನೊಳಗೊಂಡಂತೆ ಹಲವಾರು ರಂಗಗಳ ಪ್ರತಿನಿಧಿಗಳನ್ನು ವೇದಿಕೆಯಲ್ಲಿ ಆಯೋಜಿಸಲಾಗಿತ್ತು. ಈ ಮೂಲಕ ಐತಿಹಾಸಿಕ ದಾಖಲೆಯನ್ನು ನಿರ್ಮಾಣ ಮಾಡಿರುವುದು ಜಿಲ್ಲೆಯಾದ್ಯಂತ ಜನತೆಗೆ ತಿಳಿದಿರುವ ವಿಷಯವಾಗಿದೆ. ನನ್ನ ಅವಧಿಯಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅಡಿಪಾಯ ಹಾಕಿ ಬರಗೂರು ರಾಮಚಂದ್ರಪ್ಪರವರ ಅಮೃತ ಹಸ್ತದಿಂದ ಶಂಕುಸ್ಥಾಪನೆಯನ್ನೂ ನೆರವೇರಿಸಲಾಗಿತ್ತು. ಇಂದು ಸುಸಜ್ಜಿತ ಕನ್ನಡ ಭವನ ನಿರ್ಮಾಣವಾಗಿದೆ. ಇಂತಹ ಕನ್ನಡ ಭವನ ಜಿಲ್ಲೆಯಲ್ಲಿ ಎಲ್ಲೂ ಇರಲ್ಲಿಲ್ಲ. ಶಿರಾ ತಾಲ್ಲೂಕಿನಲ್ಲಿ ಭವನ ನಿರ್ಮಾಣವಾಗಿರುವುದು ರಾಜ್ಯದಲ್ಲೆ ದಾಖಲೆ ಎಂದು ಭಾವಿಸಬಹುದಾಗಿದೆ. ನಂತರ 2017ರಲ್ಲಿ ಸರ್ವೋದಯ ಮಂಡಲದ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ವಿದ್ಯಾರ್ಥಿಗಳಿಂದ ಪರೀಕ್ಷೆಗಳನ್ನು ನಡೆಸಿ ಪ್ರಶಸ್ತಿ ಪತ್ರಗಳನ್ನು ವಿತರಿಸುವ ಮೂಲಕ ಮಹಾತ್ಮ ಗಾಂಧೀಜಿಯವರ ತತ್ವ ಸಿದ್ದಾಂತಗಳ ಅರಿವಿನ ಬಗ್ಗೆ ಜಾಗೃತಿ ಮೂಡಿಸಿದ್ದೇನೆ. ಇದರ ರಾಜ್ಯ ಮಟ್ಟದ ಸಮ್ಮೇಳನವನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿಯವರ ಘನ ಅಧ್ಯಕ್ಷತೆಯಲ್ಲಿ ಸಿದ್ಧಗಂಗಾ ಮಠದಲ್ಲಿ ಆಯೋಜಿಸಿದ್ದು ಯಶಸ್ವಿಯಾಗಿ ನೆರವೇರಿತು.

      2019ರಲ್ಲಿ ಚಿತ್ರದುರ್ಗದಿಂದ ಬೆಂಗಳೂರುವರೆಗೆ ಮದ್ಯ ನಿಷೇಧ ಮಾಡುವ ಬಗ್ಗೆ ಬೃಹತ್ ಪಾದಯಾತ್ರೆ ನಡೆಸಿ 2500 ಮಂದಿ ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿದ್ದು, ಅವರಿಗೆ ಶಿರಾ ಮೂಲಕ ಹೋಗುವಾಗ ಅವರಿಗೆ ಊಟ, ತಿಂಡಿ, ವಸತಿ ವ್ಯವಸ್ಥೆ ಮಾಡಿ ಕಳುಹಿಸಲಾಗಿತ್ತು. ಹೀಗೆ ತಾಲ್ಲೂಕಿನ ಹಾಗೂ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಹೋರಾಟ ಮಾಡುವ ಮೂಲಕ ಸಮಾಜಮುಖಿ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿ ಆಯ್ಕೆಯಾದರೆ ಜಿಲ್ಲೆಯ ಲೇಖಕರು, ಸಾಹಿತಿಗಳು, ಯುವ ಪ್ರತಿಭೆಗಳನ್ನು ಗುರ್ತಿಸಿ ಪ್ರೋತ್ಸಾಹಿಸುವ, ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಬಗ್ಗೆ ಸರ್ಕಾರವನ್ನು ಒತ್ತಾಯಿಸಲಾಗುವುದು. ತಾಲ್ಲೂಕು ಹಾಗೂ ಜಿಲ್ಲಾ ಸಮ್ಮೇಳನಗಳಲ್ಲಿ ಮಹಿಳೆಯರನ್ನು ಅಧ್ಯಕ್ಷರನ್ನಾಗಿ ಮಾಡಲು ಪ್ರಾತಿನಿಧ್ಯ ನೀಡಬೇಕು. ರಾಜ್ಯದ ಗಡಿ ಭಾಗದ ಕನ್ನಡ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡುವುದು, ಕನ್ನಡ ಭವನಗಳಿಲ್ಲದ ತಾಲ್ಲೂಕುಗಳಲ್ಲಿ ಭವನ ನಿರ್ಮಾಣ ಮಾಡುವುದು ಸೇರಿದಂತೆ ಕನ್ನಡಿಗರ ಹಲವಾರು ಬೇಡಿಕೆಗಳನ್ನು ಈಡೇರಿಸಲು ನಾನು ಪ್ರಾಮಾಣಿಕವಾಗಿ ಬದ್ದನಿದ್ದು, ಹಿರಿಯರು, ಚಿಂತಕರು, ಸಾಹಿತಿಗಳು ತಮ್ಮನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಲು ಸಹಕರಿಸುವಂತೆ ಮನವಿ ಮಾಡಿದರು.

      ಶ್ರೀಆಂಜನೇಯಸ್ವಾಮಿ ವಿದ್ಯಾವರ್ಧಕ ಸಂಘದ ನಿರ್ದೇಶಕ ಬಿ.ಕೆ.ಲಕ್ಷ್ಮಣಗೌಡ, ರೈತ ಮುಖಂಡ ಮುಕುಂದಪ್ಪ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap