ಬರಗೂರು :
ಒಂದು ವರ್ಷ ಕಳೆದರೂ ಗ್ರಾಮದ ಚರಂಡಿಯಲ್ಲಿನ ಕಸ ತೆಗೆಯಲು ಮೀನಾ-ಮೇಷ ಎಣಿಸುತ್ತಿದ್ದ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ನೂತನ ಗ್ರಾಮ ಪಂಚಾಯ್ತಿ ಸದಸ್ಯ ಎಸ್.ಟಿ.ಡಿ. ಕಾಂತರಾಜು ಚಾಟಿ ಬೀಸಿದ ತಕ್ಷಣವೆ ಗ್ರಾಮ ಪಂಚಾಯ್ತಿ ಸ್ವಚ್ಛತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಚರಂಡಿಯಲ್ಲಿನ ಕಸ ತೆಗೆಯಲು ಮುಂದಾದ ಪ್ರಸಂಗ ಬರಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜರುಗಿದೆ.
ಶಿರಾ ತಾಲ್ಲೂಕು ಬರಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬರಗೂರು ಭಾಗ-3 ರ ಹೊಸ ಬಡಾವಣೆಯಲ್ಲಿ ಈಗಾಗಲೆ ಕೊರೋನಾಕ್ಕೆ ಮುಂಚೆಯೆ ಚರಂಡಿಯಿಂದ ಹೊರ ತೆಗೆದ ಕಸವನ್ನು ವಿಲೇವಾರಿ ಮಾಡದೆ ದಾರಿಯಲ್ಲಿಯೇ ಬಿಟ್ಟಿದ್ದು, ಕಸ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಜೊತೆಗೆ ಚರಂಡಿಯಲ್ಲಿ ಕಸ, ಕಡ್ಡಿ ತುಂಬಿಕೊಂಡು ದುರ್ವಾಸನೆ ಬೀರುತ್ತಿತ್ತು. ಗ್ರಾಮ ಪಂಚಾಯ್ತಿ ಚುನಾವಣೆ ನಂತರ ಚುನಾಯಿತ ಸದಸ್ಯ ಕಾಂತರಾಜು ಎಸ್.ಟಿ.ಡಿ., ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಎಚ್ಚರಿಸಿದಾಗ ಕೂಡಲೆ ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯ್ತಿ ಸ್ವಚ್ಛತಾ ಸಿಬ್ಬಂದಿ ಚರಂಡಿ ತೆಗೆಯುವಲ್ಲಿ ಮುಂದಾದರು. ಇದಕ್ಕೆ ಧ್ವ್ವನಿಗೂಡಿಸಿದ ಸದಸ್ಯೆ ಗೌರಮ್ಮ ಭಕ್ತಪ್ಪ, ಸದಸ್ಯ ಕಾಂತರಾಜು ಆರೋಪ ಸರಿಯಾಗಿದೆ. ಮುಂದಿನ ದಿನಗಳಲ್ಲಿ ಬರಗೂರು ಭಾಗ3 ರಲ್ಲಿನ ನಾವಿಬ್ಬರೂ ಸದಸ್ಯರು ನೀರು, ಸ್ವಚ್ಛತೆ, ಚರಂಡಿ ಸುವ್ಯವಸ್ಥೆ ಬಗ್ಗೆ ಆಗಿಂದಾಗ್ಗೆ ಗ್ರಾಮ ಪಂಚಾಯ್ತಿ ಗಮನಕ್ಕೆ ತಂದು ಎಚ್ಚರ ವಹಿಸಲಾಗುವುದು ಎಂದರು.
ಗ್ರಾಪಂ ಸದಸ್ಯ ಕಾಂತರಾಜು ಎಸ್.ಟಿ.ಡಿ: ಬರಗೂರು ಭಾಗ-3ರ ಹೊಸ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಹೊಸ ಪೈಪ್ ಲೈನ್ ಅಳವಡಿಸುವುದು, ಚರಂಡಿ ಹಳೆಯದಾಗಿದ್ದು, ನೀರು ಸರಿಯಾಗಿ ಹರಿಯುವಂತೆ ಮಾಡಲು ಬಾಕ್ಸ್ ಚರಂಡಿ ವ್ಯವಸ್ಥೆ ಆಗಬೇಕಿದೆ. ಈ ಕಾಮಗಾರಿಗೆ ಪಂಚಾಯ್ತಿಯಿಂದ ಕಡಿಮೆ ಅನುದಾನ ಬರುತ್ತದೆ. ತಾಲ್ಲೂಕಿನ ಜನಪ್ರತಿನಿಧಿಗಳು ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಹೆಚ್ಚಿನ ಅನುದಾನ ಕಲ್ಪಿಸಿ ಸಹಕರಿಸಿದರೆ ಇಲ್ಲಿನ ಜನತೆಗೆ ತುಂಬಾ ಅನುಕೂಲವಾಗುತ್ತದೆ ಎಂದರು.
ಗ್ರಾಮ ಪಂಚಾಯ್ತಿ ಸದಸ್ಯರಾದ ಗೌರಮ್ಮ ಭಕ್ತಪ್ಪ, ಮಂಜುನಾಥ್ ಕಂಬಿ, ಚಂದ್ರಪ್ಪ, ಬಸವರಾಜು, ರಂಗನಾಥ್, ನರಸಿಂಹಣ್ಣ ಸೇರಿದಂತೆ ಹಲವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ