ಬರಗೂರು :

ಸರ್ಕಾರ ಪ್ರತಿಯೊಬ್ಬ ನಾಗರಿಕರಿಗೂ ಉಚಿತ ಲಸಿಕೆ ಹಾಕಲು ಮುಂದಾಗುತ್ತಿದ್ದರೂ ಲಸಿಕೆ ಹಾಕಿಸಿಕೊಳ್ಳಲು ಜನರು ಹೆಚ್ಚು ಆಸಕ್ತಿ ತೋರುತ್ತಿಲ್ಲ. ಕೊರೊನಾ ರೋಗ ತಡೆಗೆ ಲಸಿಕೆ ಲಕ್ಷ್ಮಣ ರೇಖೆ ಇದ್ದಂತೆ. ಹೆದರದೆ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವಂತೆ ಆರೋಗ್ಯ ಸಹಾಯಕಿ ಸೌಮ್ಯ ಜನರಿಗೆ ಧೈರ್ಯ ತುಂಬಿದರು.
ಶಿರಾ ತಾಲ್ಲೂಕು ಹುಲಿಕುಂಟೆ ಹೋಬಳಿಯ ದೊಡ್ಡಹುಲಿಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಚಿಕ್ಕಹುಲಿಕುಂಟೆ ಗ್ರಾಮಸ್ಥರಿಗೆ ಕೋವಿಡ್ ಶೀಲ್ಡ್ ಲಸಿಕೆ ಹಾಕಿದ ವೇಳೆ ಅವರು ಮಾತನಾಡಿದರು. ಸರ್ಕಾರದ ಆದೇಶದಂತೆ ಆರೋಗ್ಯ ಇಲಾಖೆಯಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತಿದೆ. 18 ರಿಂದ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ಪರಿಗಣಿಸಿ ಲಸಿಕೆ ಹಾಕಲಾಗುತ್ತಿದೆ. ಈಗಾಗಲೇ ದೊಡ್ಡಹುಲಿಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೊಟ್ಟ, ಬಸವನಹಳ್ಳಿ, ಕ್ಯಾದಿಗುಂಟೆ, ಶ್ಯಾಸಮರು ಗ್ರಾಮಗಳಲ್ಲಿ ಶನಿವಾರ ಸುಮಾರು 250 ಮಂದಿಗೆ ಕೋವಿಡ್ ಲಸಿಕೆ ಹಾಕಲಾಗಿದೆ. ಹೆಂದೊರೆಯ 100 ಮಂದಿ, ಯಂಜಲಗೆರೆಯ 100 ಮಂದಿ ಹಾಗೂ ಚಿಕ್ಕಹುಲಿಕುಂಟೆ ಗ್ರಾಮದ 110 ಮಂದಿ ಸೇರಿದಂತೆ ಸೋಮವಾರ 310 ಮಂದಿಗೆ ಲಸಿಕೆ ಹಾಕಲಾಗಿದೆ. ಮೊದಲನೆ ಹಂತವಾಗಿ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಲಸಿಕೆ ಹಾಕಲಾಗುತ್ತದೆ. ಎರಡನೆ ಹಂತದಲ್ಲಿ ಉಳಿದ ಪ್ರತಿಯೊಬ್ಬ ನಾಗರಿಕರ ಮನ ಒಲಿಸಿ ಲಸಿಕೆ ಹಾಕಲಾಗುವುದೆಂದು ತಿಳಿಸಿದರು.
ಗ್ರಾಮ ಪಂಚಾಯ್ತಿ ಸದಸ್ಯ ಲಕ್ಷ್ಮಣ, ರವಿಕುಮಾರ್, ಗ್ರಾಮಲೆಕ್ಕಾಧಿಕಾರಿ ಭೀಮಕುಮಾರ್, ಆರೋಗ್ಯ ಇಲಾಖೆ ಅಧಿಕಾರಿ ವೆಂಕಟೇಶ್, ಆರೋಗ್ಯ ಸಹಾಯಕಿ ಸೌಮ್ಯ, ಆಶಾ ಕಾರ್ಯಕರ್ತೆ ಗೀತಮ್ಮ, ಕಂದಾಯ ಇಲಾಖೆಯ ಮಂಜುನಾಥ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








