ಬೊಮ್ಮಾಯಿ ಗೆ ಒಲಿದ ಸಿಎಂ ಪಟ್ಟ ; ಬಿಎಸ್‍ವೈ ಆಪ್ತನಿಗೆ ಮಣೆ

ತುಮಕೂರು :

      ಬಿಎಸ್‍ವೈ ರಾಜೀನಾಮೆ ಬಳಿಕ ಮುಂದಿನ ಮುಖ್ಯಮಂತ್ರಿ ಯಾರಾಗಬಹುದೆಂಬ ಜಿಜ್ಞಾಸೆಗೆ ಮಂಗಳವಾರ ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ತೆರೆಬಿದ್ದಿದ್ದು, ಯಡಿಯೂರಪ್ಪ ಆಪ್ತ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ರಾಜ್ಯದ 30 ನೇ ಮುಖ್ಯಮಂತ್ರಿಯಾಗಿ ನಿಯೋಜಿತರಾಗಿದ್ದು, ಇಂದು ಬೆಳಗ್ಗೆ 11 ಕ್ಕೆ ಸಿಎಂ ಆಗಿ ಪದಗ್ರಹಣ ಸ್ವೀಕರಿಸಿದ್ದಾರೆ.

     ಇವರೊಂದಿಗೆ ಗೋವಿಂದ ಕಾರಜೋಳ, ಆರ್.ಅಶೋಕ್, ಶ್ರೀರಾಮುಲು ಹೊಸ ಉಪಮುಖ್ಯಮಂತ್ರಿಗಳಾಗಿ ಘೋಷಣೆಯಾಗಿದ್ದು, ದಲಿತ, ವಾಲ್ಮೀಕಿ ಹಾಗೂ ಒಕ್ಕಲಿಗ ಸಮುದಾಯದವರಿಗೆ ಅವಕಾಶ ಸಿಕ್ಕಂತಾಗಿದೆ. ಈ ಮೂಲಕ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದವರಿಗೂ ಸ್ಥಾನ ದೊರೆತಿದ್ದು, ಪ್ರಾದೇಶಿಕ ಸಮತೋಲನದ ಹೊಸ ಸರಕಾರ ಅಸ್ಥಿತ್ವಕ್ಕೆ ಬಂದಿದೆ.
ಯಡಿಯೂರಪ್ಪ ರಾಜೀನಾಮೆ ವಿಚಾರದಲ್ಲಿ ಬಹುಸಂಖ್ಯಾತ ಲಿಂಗಾಯಿತ ಸಮುದಾಯದಲ್ಲಿ ಎದ್ದಿದ್ದ ಆಕ್ರೋಶ ಶಮನಗೊಳಿಸುವ ತಂತ್ರಗಾರಿಕೆಯನ್ನು ಬಿಜೆಪಿ ಹೈಕಮಾಂಡ್‍ಮಾಡಿದ್ದು, ಸಿಎಂ ರೇಸ್‍ನಲ್ಲಿದ್ದ ನಿರಾಣಿ, ಜೋಷಿ, ಅರವಿಂದ್ ಬೆಲ್ಲದ್, ಸಿ.ಟಿ.ರವಿ ಹೀಗೆ ಹಲವರ ಹೆಸರುಗಳನ್ನೆಲ್ಲ ಬದಿಗೆ ಸರಿಸಿ, ಬಿಎಸ್‍ವೈ ಆಪ್ತ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಮಂಗಳವಾರ ಮಧ್ಯಾಹ್ನ ದಿಢೀರ್ ಮುನ್ನೆಲೆಗೆ ತಂದಿತು.

      ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಮಂಗಳವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಡಿಯೂರಪ್ಪ ಅವರಿಂದಲೇ ಬೊಮ್ಮಾಯಿ ಹೆಸರನ್ನು ಸಿಎಂ ಹೆಸರನ್ನು ಪ್ರಸ್ತಾಪಿಸಿದ್ದು, ಗೋವಿಂದ ಕಾರಜೋಳ ಅನುಮೋದಿಸಿದರು. ಈ ಮೂಲಕ ಯಡಿಯೂರಪ್ಪ ಬೆನ್ನಿಗೆ ಬಿದ್ದಿರುವ ಲಿಂಗಾಯಿತ ಮತ ಬ್ಯಾಂಕ್ ಅನ್ನು ಪಕ್ಷದೊಟ್ಟಿಗೆ ಹಿಡಿದಿಟ್ಟುಕೊಳ್ಳುವುದು ಹಾಗೂ ಉತ್ತರ ಕರ್ನಾಟಕಕ್ಕೆ ಸಿಎಂ ಸ್ಥಾನದ ಅವಕಾಶ ಕೊಡುವ ಪಕ್ಷದ ವರಿಷ್ಠರ ಲೆಕ್ಕಚಾರ ಈಡೇರಿದೆ.

ನಿಯೋಜಿತ ಸಿಎಂಗೆ ಬಿ.ಎಸ್.ಯಡಿಯೂರಪ್ಪ ಆದಿಯಾಗಿ ಕೇಂದ್ರದಿಂದ ಬಂದಿದ್ದ ವೀಕ್ಷಕರಾದ ಧರ್ಮೇಂದ್ರಪ್ರದಾನ್, ಕಿಶನ್ ರೆಡ್ಡಿ ಹಾಗೂ ಪಕ್ಷದ ಇತರೆ ನಾಯಕರು ಹೂಗುಚ್ಛ ನೀಡಿ ಅಭಿನಂದಿಸಿದರು. ಪ್ರತಿಯಾಗಿ ಬಸವರಾಜ ಬೊಮ್ಮಾಯಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

      ಬಿಎಸ್‍ವೈ ಹಿಡಿತದಲ್ಲಿ ಹೊಸ ಸರಕಾರ:

      ಹೊಸ ಮುಖ ಮುಖ್ಯಮಂತ್ರಿ ಸ್ಥಾನಕ್ಕೆ ಕೂರುತ್ತಾರೆಂಬ ಬಿಎಸ್‍ವೈ ವಿರೋಧಿ ಟೀಂನ ಲೆಕ್ಕಾಚಾರ ನೂತನ ಸಿಎಂ ಆಯ್ಕೆಯ ಮೂಲಕ ತಲೆಕೆಳಕಾಗಿದ್ದು, ಹೊಸ ಸಿಎಂ ಆಯ್ಕೆಯಲ್ಲಿ ಯಡಿಯೂರಪ್ಪ ಅವರ ಕೈ ಮೇಲಾಗಿದೆ. ತಮ್ಮ ಆಪ್ತನಿಗೆ ಮುಖ್ಯಮಂತ್ರಿ ಪಟ್ಟ ಕೊಡಿಸುವಲ್ಲಿ ಬಿಎಸ್‍ವೈ ಯಶಸ್ವಿಯಾಗಿದ್ದು, ನಿಯೋಜಿತ ಸಿಎಂ ಘೋಷಣೆ ವೇಳೆ ಬೊಮ್ಮಾಯಿ ಸಹ ಬಿಎಸ್‍ವೈ ಕಾಲಿಗೆ ಬಿದ್ದು, ಅವರ ಮಾರ್ಗದರ್ಶನದಲ್ಲಿ ಮುಂದುವರಿಯುವೆ ಎಂದಿರುವುದು ಹೊಸ ಸರಕಾರದಲ್ಲಿ ಬಿಎಸ್‍ವೈ ಹಿಡಿತವಿರುವುದು ಸ್ಪಷ್ಟವಾಗಿದೆ. ತಮ್ಮ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಗೋವಿಂದ ಕಾರಜೋಳ ಅವರನ್ನು ಮತ್ತೆ ಅದೇ ಸ್ಥಾನದಲ್ಲಿ ಮುಂದುವರಿಸುವಲ್ಲೂ ಪ್ರಭಾವ ಬೀರಿದ್ದಾರೆ. ಯಡಿಯೂರಪ್ಪ ಜೊತೆಗಿರುವ ಅಶೋಕ್ ಅವರಿಗೂ ಸಹ ಮತ್ತೆ ಡಿಸಿಎಂ ಹುದ್ದೆ ಅವಕಾಶ ಸಿಕ್ಕಿದ್ದು, ಡಿಸಿಎಂ ಸ್ಥಾನದ ನಿರೀಕ್ಷೆಯಲ್ಲಿದ್ದ ವಿರೋಧಿ ಬಣದವರ ಲೆಕ್ಕಾಚಾರಗಳು ಹುಸಿಯಾಗಿವೆ. ಹೊಸ ಸರಕಾರದಲ್ಲಿ ಉನ್ನತ ಸ್ಥಾನ ಸಿಗದಿದ್ದರೂ ಸಂಪುಟದಲ್ಲಾದರೂ ಸ್ಥಾನ ಸಿಗುವ ನಿರೀಕ್ಷೆಯಲ್ಲಿ ವಿರೋಧಿ ಟೀಂ ಇದ್ದು, ಸಂಪುಟ ವಿಸ್ತರಣೆಗಾಗಿ ಕಾದಿದೆ.

ಮತ್ತೆ ಮರುಕಳಿಸಿದ ಅಪ್ಪ-ಮಗ ಸಿಎಂ ಆದ ಇತಿಹಾಸ :

      ಕರ್ನಾಟಕ ರಾಜಕೀಯ ಚರಿತ್ರೆಯಲ್ಲಿ ಅಪ್ಪ-ಮಗ ಮುಖ್ಯಮಂತ್ರಿ ಆದ ಉದಾಹರಣೆ ದೇವೇಗೌಡರ ಕುಟುಂಬಕ್ಕೆ ಮಾತ್ರ ಇತ್ತು. 1994ರಲ್ಲಿ ದೇವೇಗೌಡರು ಸಿಎಂ ಆಗಿ ಆಯ್ಕೆಯಾದರೆ, ಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ 2006-14ರಲ್ಲಿ ಸಿಎಂ ಆದರು. ಇದೇ ಮಾದರಿಯಲ್ಲಿ 1988ರಲ್ಲಿ 281 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದ ಎಸ್.ಆರ್.ಬೊಮ್ಮಾಯಿ ಅವರ ಪುತ್ರ 2021 ಜು.28ರಿಂದ ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.

ಮೂಲತಃ ಜನತಾ ಪರಿವಾರದ ನಾಯಕ :

      ಬಸವರಾಜ ಬೊಮ್ಮಾಯಿ ಅವರು ಮೂಲತಃ ಜನತಾ ಪರಿವಾರದ ನಾಯಕರಾಗಿದ್ದು, ಬಿಇ ಮೆಕ್ಯಾನಿಕಲ್ ಪದವೀಧರರಾಗಿದ್ದಾರೆ. ತಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಅವರ ರಾಜಕೀಯ ಗರಡಿಯಲ್ಲಿಪಳಗಿರುವ ಬಸವರಾಜು ಬೊಮ್ಮಾಯಿ ಅವರು ನಿರ್ವಿವಾದಿತ ನಾಯಕನಾಗಿ ಗುರುತಿಸಲ್ಪಟ್ಟಿದ್ದಾರೆ. 1998 ಹಾಗೂ 2004ರಲ್ಲಿ ಜನತಾದಳದಿಂದ ಸ್ಥಳೀಯ ಸಂಸ್ಥೆ ಕ್ಷೇತ್ರದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಬೊಮ್ಮಾಯಿ ಅವರು ನಂತರ 2008ರಲ್ಲಿ ಹಾವೇರಿ ಜಿಲ್ಲೆ ಶಿಗ್ಗಾವಿ ಕ್ಷೇತ್ರದಿಂದ ಸತತವಾಗಿ 3 ಅವಧಿಯಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದು 2008ರ ಬಿಜೆಪಿ ಸರಕಾರದಲ್ಲಿ ಜಲಸಂಪನ್ಮೂಲ ಸಚಿವ, 2019 ಜುಲೈನಿಂದ ಗೃಹಸಚಿವ, ಕಾನೂನು ಸಂಸದೀಯ ವ್ಯವಹಾರಗಳ ಹೆಚ್ಚುವರಿ ಹೊಣೆಯನ್ನು ನಿಭಾಯಿಸಿರುವ ಅನುಭವ ಹೊಂದಿದ್ದಾರೆ.

      ನನ್ನನ್ನು ಸಿಎಂ ಹುದ್ದೆಗೆ ಆಯ್ಕೆ ಮಾಡಿದ ಪಕ್ಷದ ವರಿಷ್ಠರು, ಶಾಸಕರಿಗೆ ಕೃತಜ್ಞತೆ ಸಲ್ಲಿಸುವೆ. ಯಡಿಯೂರಪ್ಪ ನನ್ನ ಹೆಸರನ್ನು ಪ್ರಸ್ತಾಪಿಸಿ ಆಶೀರ್ವಾದ ಮಾಡಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನಪರ ಆಡಳಿತ ನೀಡುವೆ. ಕರ್ನಾಟಕವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಶ್ರಮಿಸುವೆ.

-ಬಸವರಾಜ ಬೊಮ್ಮಾಯಿ ನಿಯೋಜಿತ ಸಿಎಂ.

      ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಅವರಿಗೆ ಶುಭಾಶಯಗಳು. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ರಾಜ್ಯಕ್ಕೆ ಪರಿಹಾರಾತ್ಮಕವಾಗಿ ಕೆಲಸ ಮಾಡುವಿರೆಂದು ನಿರೀಕ್ಷಿಸುವೆ. ನೀರಾವರಿ ವಿಚಾರಗಳಲ್ಲಿ ತಮಗೆ ಜ್ಞಾನವುಂಟು. ಅಣೆಕಟ್ಟು ನಿರ್ಮಾಣದಂಥ ವಿಷಯದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳತ್ತ ತಾವು ಗಮನಹರಿಸುವಿರೆಂದು ಭಾವಿಸುವೆ.

-ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap