ಸ್ವಪಕ್ಷದವರಿಂದಲೆ ಯತ್ನಾಳ್‌ ಉಚ್ಚಾಟನೆಗೆ ಆಗ್ರಹ…!

ಬಿಜಾಪುರ :

    ಬಿಜೆಪಿ ಮುಖಂಡ ಹಾಗೂ ಹಿಂದೂ ಫೈರ್‌ ಬ್ರಾಂಡ್‌ ಎಂದೇ ಖ್ಯಾತಿ ಗಳಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಸಂಕಷ್ಟ ಎದುರಾಗಿದೆ. ಯತ್ನಾಳ ಅವರು ನೀಡುವ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರವಾಗುತ್ತಿದೆ. ಅವರನ್ನು ಉಚ್ಚಾಟನೆ ಮಾಡಬೇಕು ಎನ್ನುವ ಆಗ್ರಹಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ.

   ಯತ್ನಾಳ ಅವರು ಬಿಜೆಪಿಯಲ್ಲಿ ಯಾವುದೇ ತಪ್ಪು ನಡೆದರೂ ಬಹಿರಂಗವಾಗಿ ಹೇಳುತ್ತಾರೆ. ಬಿಜೆಪಿಯ ಪ್ರಭಾವಿ ನಾಯಕ ಬಿ.ಎಸ್‌ ಯಡಿಯೂರಪ್ಪ ಹಾಗೂ ಈಗ ಇರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧವೂ ಅವರು ಗುಡುಗಿದ್ದು ಇದೆ.

   ಈಚೆಗೆ ಅವರು ಮಾಡಿರುವ ಗಂಭೀರ ಆರೋಪವೂ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದೆ. ರಾಜ್ಯ ಸರ್ಕಾರವನ್ನು ಬೀಳಿಸುವ ಉದ್ದೇಶದಿಂದ ಪ್ರಭಾವಿ ನಾಯಕರೊಬ್ಬರು ಬರೋಬ್ಬರಿ 1,000 ಸಾವಿರ ಕೋಟಿ ರೂಪಾಯಿ ಎತ್ತಿಟ್ಟದ್ದಾರೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಈ ಸಂಬಂಧ ಕಾಂಗ್ರೆಸ್‌ ಈಗಾಗಲೇ ದೂರು ದಾಖಲಿಸಿದೆ. ಇದೀಗ ಬಿಜೆಪಿಯಲ್ಲೇ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟನೆ ಮಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

    ಬಿಜೆಪಿ ಪ್ರಭಾವಿ ಶಾಸಕ ಬಸನಗೌಡ ಪಾಟೀಲ ಅವರನ್ನು ಬಿಜೆಪಿಯಿಂದ ಕೂಡಲೇ ಉಚ್ಚಾಟನೆ ಮಾಡಿ ಎಂದು ದಾವಣಗೆರೆ ಜಿಲ್ಲಾ ಬಿಜೆಪಿ ಘಟಕದಿಂದ ನಿರ್ಣಯ ತೆಗೆದುಕೊಳ್ಳಲಾಗಿದೆ. ದಾವಣಗೆರೆಯಲ್ಲಿ ಮಾಜಿ ಸಚಿವ ಎಸ್‌.ಎ ರವೀಂದ್ರನಾಥ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಯತ್ನಾಳ ಉಚ್ಚಾಟನೆಯ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೇ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸಭೆಯನ್ನು ನಡೆಸಿ, ಬಿಜೆಪಿ ವರಿಷ್ಠರಿಗೆ ದೂರು ನೀಡುವುದಕ್ಕೂ ನಿರ್ಧರಿಸಲಾಗಿದೆ.

    ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಅವರು ಮತ್ತೊಮ್ಮೆ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಗುಡುಗಿದ್ದಾರೆ. ಯತ್ನಾಳ ಬೇಷರತ್‌ ಕ್ಷಮೆಯಾಚಿಸುವಂತೆ ಹೇಳಬೇಕು. ಕ್ಷಮೆ ಕೇಳದಿದ್ದರೆ ಅವರ ಮೇಲೆ ಪಕ್ಷದಿಂದ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 

    ಬಿಜೆಪಿಯ ಹಿರಿಯ ಮುಖಂಡ ಬಿ.ಎಸ್‌ ಯಡಿಯೂರಪ್ಪ ಅವರ ಪುತ್ರ ಹಾಗೂ ಶಾಸಕ ಬಿ.ವೈ ವಿಜಯೇಂದ್ರ ಅವರು ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರಾದಾಗಿನಿಂದಲೂ ಒಂದು ಬಣ ಬಿ.ಎಸ್‌ ಯಡಿಯೂರಪ್ಪ ಹಾಗೂ ವಿಜಯೇಂದ್ರನನ್ನು ವಿರೋಧಿಸುತ್ತಿದೆ. ರೇಣುಕಾಚಾರ್ಯ ಅವರು ಯಡಿಯೂರಪ್ಪ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಯತ್ನಾಳ ಬಂಡಾಯದ ಗುಂಪಿನಲ್ಲಿದ್ದು (ಭಿನ್ನಮತ) ವಿವಿಧ ಬಿಜೆಪಿ ನಾಯಕರೊಂದಿಗೆ ಪ್ರತ್ಯೇಕ ಸಭೆ ನಡೆಸುತ್ತಿದ್ದಾರೆ.

Recent Articles

spot_img

Related Stories

Share via
Copy link