ಬಿಬಿಎಂಪಿಗೆ ಹಿಡಿಶಾಪ ಹಾಕಿದ ಬೆಂಗಳೂರು ಜನತೆ ….!

ಬೆಂಗಳೂರು:

   ಕದಿರೇನಹಳ್ಳಿ ಅಂಡರ್‌ಪಾಸ್ ಬಳಿ ಬೇಂದ್ರೆನಗರ ಮತ್ತು ಕದಿರೇನಹಳ್ಳಿಗೆ ಹೋಗುವ ರಸ್ತೆಯಲ್ಲಿ ಕಸದ ರಾಶಿ ತುಂಬಿದ್ದು, ಗಬ್ಬು ನಾರುತ್ತಿರುವ ರಸ್ತೆ ಕಂಡು ಸಾರ್ವಜನಿಕರು ಬೆಂಗಳೂರು ಮಹಾನಗರ ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ.

   ರಸ್ತೆಯ ಎಲ್ಲೆಡೆ ಕಸ ತುಂಬಿದೆ. ಬಿಬಿಎಂಪಿಗೆ ಸೇರಿದ ಕಸ ತುಂಬಿದ ಮಿನಿ ಆಟೋಗಳನ್ನು ಇಲ್ಲಿಯೇ ನಿಲ್ಲಿಸಲಾಗುತ್ತಿದೆ. ವಾರಗಟ್ಟಲೆ ಈ ವಾಹನಗಳು ಇಲ್ಲಿಯೇ ಇರುತ್ತವೆ. ಈ ಅವ್ಯವಸ್ಥೆಗೆ ಪಾಲಿಕೆ ಹಾಗೂ ಜನರು ಇಬ್ಬರನ್ನು ದೂಷಿಸಬೇಕಾಗಿದೆ. ಈ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಬಿಬಿಎಂಪಿ ವಿಫಲವಾಗಿದೆ. ಬಿಬಿಎಂಪಿಯ ನಿರ್ಲಕ್ಷ್ಯದಿಂದಾಗಿ ಜನರು ಅಂಡರ್ ಪಾಸ್ ಬಳಿ ಕಸ ಎಸೆಯುತ್ತಿದ್ದಾರೆಂದು ಕುಮಾರಸ್ವಾಮಿ ಲೇಔಟ್‌ನ ನಿವಾಸಿ ತಿಮ್ಮಯ್ಯ ಅವರು ಹೇಳಿದ್ದಾರೆ.

   ಸ್ಥಳದಲ್ಲಿ ಬಿಬಿಎಂಪಿ ವಾಹನಗಳು ನಿಲುಗಡೆಯಾಗುವುದರಿಂತ ರಾತ್ರಿ ವೇಳೆ ಜನರು ಕಸ ಎಸೆದು ಹೋಗುತ್ತಾರೆ. ಪರಿಣಾಮ ಹಸಿ ಹಾಗೂ ಒಣ ತ್ಯಾಜ್ಯದ ರಾಶಿಗಳು ಸುಮಾರು 80 ಮೀಟರ್ ವ್ಯಾಪ್ತಿಯವರೆಗೂ ಇದ್ದು, ಇದು ದುರ್ವಾಸನೆಯನ್ನುಂಟು ಮಾಡಿದೆ.

  ಒಂದು ಕೈಯಿಂದ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ. ಎರಡೂ ಕೈಗಳು ಬೇಕೇ ಬೇಕು. ಹಾಗೆಯೇ ನಗರದ ಸ್ವಚ್ಛತೆ ಕಾಪಾಡಲು ನಾಗರೀಕರ ಸಹಕಾರ ಮುಖ್ಯವಾಗುತ್ತದೆ. ಹೀಗಾಗಿ, ಪಾಲಿಕೆ ಹಾಗೂ ನಾಗರೀಕರು ಪರಸ್ಪರ ಸಹಕಾರದಿಂದ ನಗರದ ಸ್ವಚ್ಛತೆ ಕಾಪಾಡಬೇಕು ಎಂದು ತಿಳಿಸಿದ್ದಾರೆ.ಸ್ಥಳೀಯ ಅಂಗಡಿ ಮಾಲೀಕ ಮೊಹಮ್ಮದ್ ಜುಬೇರ್ ಎಂಬುವವರು ಮಾತನಾಡಿ, ಕಳೆದ ನಾಲ್ಕು ತಿಂಗಳುಗಳಿಂದ ಪಾಲಿಕೆಗೆ ಸೇರಿದ 3 ವಾಹನಗಳು ಇಲ್ಲಿಯೆ ನಿಂತಿವೆ. ಸ್ಥಳದಲ್ಲಿ ದೊಡ್ಡ ದೊಡ್ಡ ಸೋಫಾ, ಬಾತ್ ಟಬ್ ಹಾಗೂ ಇತರೆ ತ್ಯಾಜ್ಯಗಳನ್ನು ಎಸೆಯಲಾಗಿದೆ. ಕೋಳಿ ಅಂಗಡಿ, ಕಾರು ರಿಪೇರಿ ಮಾಡುವವರು ಹಾಗೂ ಸ್ಥಳೀಯ ನಿವಾಸಿಗಳು ರಾತ್ರಿ ವೇಳೆ ಕಸ ಎಸೆದು ಹೋಗುತ್ತಿದ್ದಾರೆ. ಈ ರಸ್ತೆ ಇದೀಗ ತ್ಯಾಜ್ಯ ಎಸೆಯಲು ಹಾಗೂ ವಾಹನಗಳ ನಿಲುಗಡೆಯ ಸ್ಥಳವಾಗಿ ಮಾರ್ಪಟ್ಟಿದೆ ಎಂದು ಹೇಳಿದ್ದಾರೆ.

    ಪಾಲಿಕೆ ಈ ಬಗ್ಗೆ ಕೂಡಲೇ ಗಮನ ಹರಿಸಬೇಕು. ನಾಗರೀಕರೂ ಕೂಡ ಜವಾಬ್ದಾರಿಯಿಂದ ವರ್ತಿಸಿ ರಸ್ತೆಗೆ ತ್ಯಾಜ್ಯವನ್ನು ಎಸೆಯಬಾರದು. ಮುಖ್ಯರಸ್ತೆಯಲ್ಲಿಯೇ ಕಸದ ರಾಶಿ ಬಿದ್ದಿರುವುದು ಇಲ್ಲಿನ ನಿವಾಸಿಗಳು ಹಾಗೂ ಅಧಿಕಾರಿಗಳಿಗೆ ನಾಚಿಕೆ ತರುವಂತಿದೆ ಎಂದು ತಿಮ್ಮಯ್ಯ ಅವರು ಕಿಡಿಕಾರಿದ್ದಾರೆ.

   ಈ ಕುರಿತು ಬಿಬಿಎಂಪಿ ದಕ್ಷಿಣ ವಲಯ ಆಯುಕ್ತ ವಿನೋದ್ ಪ್ರಿಯಾ ಅವರು ಪ್ರತಿಕ್ರಿಯಿಸಿದ್ದು, ಈ ಕುರಿತು ಪರಿಶೀಲನೆ ನಡೆಸಿ, ಶೀಘ್ರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

Recent Articles

spot_img

Related Stories

Share via
Copy link
Powered by Social Snap