ತೆರಿಗೆ ಬಾಕಿ : 115 ಕಟ್ಟಡಗಳಿಗೆ ಬೀಗ ಜಡಿದ ಬಿಬಿಎಂಪಿ…!

ಬೆಂಗಳೂರು:

    ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸುಸ್ತಿದಾರರಿಗೆ ಹಲವು ನೋಟಿಸ್‌ ನೀಡಿದ್ದರೂ ಬಾಕಿ ಪಾವತಿಸದ್ದರಿಂದ ಕಟ್ಟಡಗಳಿಗೆ ಬೀಗಮುದ್ರೆ ಹಾಕುವ ಕಾರ್ಯಾಚರಣೆಯನ್ನು ಬಿಬಿಎಂಪಿ ಆರಂಭಿಸಿದೆ.

   ಬುಧವಾರ ಸಂಜೆಯ ವೇಳೆಗೆ ಎಂಟೂ ವಲಯದಲ್ಲಿ 115 ಕಟ್ಟಡಗಳಿಗೆ ಬೀಗ ಹಾಕಲಾಗಿದೆ. ಪೂರ್ವ ವಲಯದಲ್ಲಿ ಅತಿ ಹೆಚ್ಚು ಕಟ್ಟಡಗಳಿಗೆ ಅಂದರೆ 32 ಬೀಗಮುದ್ರೆ ಹಾಕಲಾಗಿದೆ. ಪಶ್ಚಿಮದಲ್ಲಿ 30, ರಾಜರಾಜೇಶ್ವರಿ ನಗರದಲ್ಲಿ 17, ದಕ್ಷಿಣದಲ್ಲಿ 13, ಯಲಹಂಕದಲ್ಲಿ ಎಂಟು ಹಾಗೂ ಬೊಮ್ಮನಹಳ್ಳಿ, ದಾಸರಹಳ್ಳಿ, ಮಹದೇವಪುರ ವಲಯಗಳಲ್ಲಿ ತಲಾ ಐದು ಕಟ್ಟಡಗಳಿಗೆ ಬೀಗ ಹಾಕಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

   ಪೂರ್ವ ವಲಯ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗಮುದ್ರೆ ಹಾಕಲಾಗುತ್ತಿದೆ ಎಂದು ವಲಯ ಆಯುಕ್ತೆ ಸ್ನೇಹಲ್ ತಿಳಿಸಿದರು. ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಮಿಟ್ಟಲ್ ಟವರ್‌ನಲ್ಲಿ ಆಸ್ತಿ ತೆರಿಗೆ ಪಾವತಿಸದ ಗೋಯಲ್ ಆಸ್ತಿಗೆ ಬುಧವಾರ ಬೀಗಮುದ್ರೆ ಹಾಕಲು ಮುಂದಾದಾಗ, ಆಸ್ತಿ ಮಾಲೀಕರು ಬಾಕಿಯಿದ್ದ 17,42,412 ರು. ತೆರಿಗೆಯನ್ನು ಕೂಡಲೇ ಪಾವತಿಸಿದರು ಎಂದು ತಿಳಿಸಿದ್ದಾರೆ. ವಿಭಾಗವಾರು ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು ಹಾಗೂ ಪರಿಷ್ಕರಣೆ ಪ್ರಕರಣಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

   ಸಮಯಾವಕಾಶವನ್ನು ನೀಡಿದ್ದರೂ ಆಸ್ತಿ ತೆರಿಗೆಯನ್ನು ಪಾವತಿಸಿರುವುದಿಲ್ಲ. ಆದ್ದರಿಂದ ಬೀಗಮುದ್ರೆ ಹಾಕಿ, ಬಾಕಿ ಆಸ್ತಿ ತೆರಿಗೆ ವಸೂಲಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಪೂರ್ವ ವಲಯ ವ್ಯಾಪ್ತಿಯಲ್ಲಿ 2,418 ಪರಿಷ್ಕರಣೆ ಪ್ರಕರಣಗಳ ಆಸ್ತಿಗಳಿಂದ ಸುಮಾರು 66 ಕೋಟಿ ರು. ಆಸ್ತಿ ತೆರಿಗೆ ಬಾಕಿ ಇದೆ. 32,584 ಸುಸ್ತಿದಾರರು 61.76 ಕೋಟಿ ರು.ಹಣ ಪಾವತಿಸಬೇಕಾಗಿದೆ.ಅಭಿಯಾನದ ಮೂಲಕ ಹಂತ-ಹಂತವಾಗಿ ಎಲ್ಲಾ ಬಾಕಿ ಆಸ್ತಿ ತೆರಿಗೆ ಸಂಗ್ರಹಿಸಲಾಗುವುದೆಂದು ಹೇಳಿದರು.

Recent Articles

spot_img

Related Stories

Share via
Copy link
Powered by Social Snap