ಅನಧಿಕೃತ ಜಾಹಿರಾತಿಗೆ ಕಡಿವಾಣ ಹಾಕಲು ಮುಂದಾದ BBMP….!

ಬೆಂಗಳೂರು

    ಬೆಂಗಳೂರು ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ಸ್, ಬಂಟಿಂಗ್ಸ್, ಭಿತ್ತಿಪತ್ರಗಳು ಇನ್ನಿತರ ಜಾಹೀರಾತುಗಳ ತೆರವು ಮತ್ತು ಕಡಿವಾಣಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಾನೂನು ರೀತಿ ಕ್ರಮಕ್ಕೆ ಮುಂದಾಗಿದೆ. ಈ ಸಂಬಂಧ ಅಭಿಯಾನ ಆರಂಭಿಸಿದೆ. ದೂರು ನೀಡುವ ಸಾರ್ವಜನಿಕರಿಗಾಗಿ ವಲಯವಾರು ನಿಯಂತ್ರಣಾ ಕೊಠಡಿ ಸ್ಥಾಪಿಸಿದೆ.

   ಬಿಬಿಎಂಪಿಯು ತನ್ನ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ಸ್, ಬಂಟಿಂಗ್ಸ್ ಇತರೆ ಜಾಹೀರಾತುಗಳ ನಿಯಂತ್ರಿಸಲು “ಜಾಹೀರಾತು ಮುಕ್ತ ಅಭಿಯಾನ” ಆರಂಭಿಸಿದೆ.

    ಹಾಲಿ ಜಾರಿಯಲ್ಲಿರುವ ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೊರಾಂಗಣ ಜಾಹೀರಾತು ಫಲಕ ಮತ್ತು ಸಾರ್ವಜನಿಕ ಸಂದೇಶದ ಉಪ ವಿಧಿಗಳು-2018″ ರಲ್ಲಿ ಅಂಗಡಿ ಮುಂಗಟ್ಟು ಜಾಹೀರಾತುಗಳು, ವಾಹನ ಸ್ವ-ಜಾಹೀರಾತು ಇನ್ನಿತರೆ ಸಣ್ಣಪುಟ್ಟ ಜಾಹೀರಾತುಗಳನ್ನು ಸೀಮಿತ ಅವಧಿಗೆ ಮತ್ತು ಸೀಮಿತ ಅಳತೆಗೆ(ಪಿಪಿಪಿ ಯೋಜನೆಗಳು ಸೇರಿದಂತೆ) ಅನುಮತಿಸಲು ಮಾತ್ರ ಅವಕಾಶ ಇದೆ ಎಂದು ಬಿಬಿಎಂಪಿ ಹೇಳಿದೆ.

    ಮೇಲಿನವುಗಳನ್ನು ಬಿಟ್ಟು ಇತರೆ ಯಾವುದೇ ವಸತಿ ಪ್ರದೇಶ, ಖಾಸಗಿ ಸ್ವತ್ತುಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಿ ವಾಣಿಜ್ಯ ಜಾಹೀರಾತು, ಎಲ್.ಇ.ಡಿ ಜಾಹೀರಾತು ಪ್ರದರ್ಶನ ಹಾಗೂ ಸಾರ್ವಜನಿಕ ಮತ್ತು ವೈಯಕ್ತಿಕ ಜಾಹೀರಾತುಗಳು, ಶುಭಾಶಯಗಳು, ಸಭೆ ಸಮಾರಂಭಗಳು ಕುರಿತ ಜಾಹೀರಾತು / ಪ್ರಕಟಣೆಗಳ ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಭಿತ್ತಿಪತ್ರ, ಬಾವುಟಗಳು ಇತ್ಯಾದಿ ಅಳವಡಿಸುವುದನ್ನು ನಿಷೇದಿಸಲಾಗಿದೆ.  

    ಹೀಗಿದ್ದರೂ ಸಹ ಮೇಲಿಂದ ಮೇಲೆ ನಿಯಮ ಉಲ್ಲಂಘನೆ ಆಗುತ್ತಿದೆ. ಸಾರ್ವಜನಿಕ ಸುಗಮ ಸಂಚಾರಕ್ಕೆ ಅಡ್ಡಿ ಆಗುತ್ತಿರುವುದಲ್ಲದೇ, ನಗರದ ಸೌಂದರ್ಯ ಹಾಳಾಗುತ್ತಿದೆ ಮತ್ತು ಪರಿಸರಕ್ಕೆ ಇವೆಲ್ಲವು ಮಾರಕ ಆಗಿದೆ ಎಂದು ಪ್ರತಿಪಾದಿಸಿದೆ.

   ರಾಜ್ಯ ಸರ್ಕಾರವು ಪರಿಸರ (ಸಂರಕ್ಷಣೆ), ಕಾಯಿದೆ 1986ರ ಸೆಕ್ಷನ್ 5ರ ಅಡಿಯಲ್ಲಿ ಅಧಿಕಾರ ಚಲಾಯಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ, ಅಪಜೀ 17 ಇಪಿಸಿ 2012 ಬೆಂಗಳೂರು ದಿನಾಂಕ: 11-03-2016 ರಂತೆ ಪ್ಲಾಸ್ಟಿಕ್ ಬಳಸುವುದನ್ನು ನಿಷೇಧಿಸಲಾಗಿದೆ.  

   ನಗರದ ವಸತಿ ಪ್ರದೇಶಗಳಲ್ಲಿ, ಖಾಸಗಿ ಆಸ್ತಿ, ಅನಧಿಕೃತ ವಾಣಿಜ್ಯ ಜಾಹೀರಾತುಗಳು, ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಭಿತ್ತಿಪತ್ರಗಳು, ಇನ್ನಿತರೆ ಮುದ್ರಣ ಪ್ರಕಟಣೆ/ಜಾಹೀರಾತುಗಳು ಕಂಡು ಬಂದಲ್ಲಿ ಬಿಬಿಎಂಪಿ ಕೇಂದ್ರ ಕಚೇರಿ ಹಾಗೂ ಆಯಾ ವಲಯಗಳ ಕಚೇರಿಗಳಿಗೆ ಸಾರ್ವಜನಿಕರು ಮಾಹಿತಿ ನೀಡಬೇಕು. ಪರಿಸರಕ್ಕೆ ಮಾರಕವಾದ ಈ ಜಾಹೀರಾತು ನಿಯಂತ್ರಣಕ್ಕೆ ನಾಗಿಕರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

   ಮಾಹಿತಿ ದೊರೆತಲ್ಲಿ ಯಾವುದೇ ಅನಧಿಕೃತ ಜಾಹೀರಾತು ಪ್ರದರ್ಶನ ಮತ್ತು ಜಾಹೀರಾತು ಫಲಕಗಳಿದ್ದು, ಬಿಬಿಎಂಪಿ ಸಿಬ್ಬಂದಿ ಅಧಿಕಾರಿಗಳು ಅವರಿಗೆ ಸಂಬಂಧಪಟ್ಟವರಿಗೆ ದಂಡ ವಿಧಿಸಿ ಜಾಹೀರಾತು ತಕ್ಷಣವೇ ತೆರವುಗೊಳಿಸಲಿದೆ. ಇದಕ್ಕೆ ಸಂಬಂಧಿಸಿದಂತೆ ಅಪರಾಧ ಎಸಗಿರುವವರಿಗೆ ಕರ್ನಾಟಕ ಮುಕ್ತ ಸ್ಥಳಗಳ (ವಿರೂಪಗೊಳಿಸುವಿಕೆ ತಡೆ) ಕಾಯ್ದೆ 1981ರ ಅಡಿಯಲ್ಲಿ ಸದರಿಯವರ ವಿರುದ್ಧ ಎಫ್.ಐ.ಆರ್ ದಾಖಲು ಮಾಡಿ, ಕಾನೂನು ರೀತಿಯ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

    ಅನಧಿಕೃತ ವಿವಿಧ ಜಾಹೀರಾತುಗಳನ್ನು ನಿಯಂತ್ರಿಸುವ ಮುಕ್ತ ಅಭಿಯಾನಕ್ಕೆ ನಾಗರಿಕರು ಕೈ ಜೋಡಿಸಲು ಸಹಾಯವಾಗುವಂತೆ ವಲಯವಾರು ನಿಯಂತ್ರಣಾ ಕೊಠಡಿ ಸ್ಥಾಪಿಸಲಾಗಿದೆ. ನಾಗರಿಕರು ಸಂಪರ್ಕಿಸಬಹುದು ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap