ಸದ್ಯ ಕೃಷಿಭೂಮಿಯಿಂದ ಪರಿವರ್ತನೆಯಾದ ಜಾಗಗಳು, ಬಿಡಿಎ ಸ್ವಾಧೀನ ಬಳಿಕ ಕೈಬಿಟ್ಟ ಜಾಗಗಳು, ಎ ಖಾತಾ, ಬಿ ಖಾತಾ ಪಡೆಯುವಾಗ ಮ್ಯಾನುವಲ್ ಇದ್ದಿದ್ದರಿಂದ ಕೆಲ ದಾಖಲೆಗಳು ಇಲ್ಲದಿದ್ದರೂ ಖಾತಾ ಲಭ್ಯವಾಗಿದೆ. ಆದರೆ, ಇದೀಗ ಇ-ಖಾತಾ ಮಾಡಿಸಲು ಕೆಲ ದಾಖಲೆಗಳು ಸೂಕ್ತ ರೀತಿಯಲ್ಲಿ ಒದಗಿಸಲು ಆಗದಿರುವುದರಿಂದ ಜನರಿಗೆ ಸಂಕಷ್ಟವಾಗಿದೆ. ಕಟ್ಟಡ ಮಂಜೂರು ನಕ್ಷೆ, ಕೂಡ ಹಲವು ಮಾಲೀಕರ ಬಳಿ ಇಲ್ಲದಿರುವುದು ಕೂಡ ಸಮಸ್ಯೆಗೆ ಕಾರಣವಾಗಿದೆ. ಇ-ಖಾತಾ ಪಡೆಯಲು ಇನ್ನೂ ಪರದಾಡವ ಸ್ಥಿತಿ ನಿರ್ಮಾಣವಾಗಿದೆ. ಇ-ಖಾತಾ ಪಡೆಯಲು ಹೋದರೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬರುತ್ತಿದ್ದು, ಇ-ಖಾತಾ ಸಮಸ್ಯೆಗಳನ್ನು ಬಗೆಹರಿಸದ ಪಾಲಿಕೆ ವಿರುದ್ಧ ಜನರು ಕಿಡಿಕಾರುತ್ತಿದ್ದಾರೆ.
ಇತ್ತ ಇ-ಖಾತಾ ಸಮಸ್ಯೆಗೆ ಹೆಲ್ಪ್ ಲೈನ್ ಬಿಟ್ಟು ಸೈಲೆಂಟ್ ಆಗಿರೋ ಪಾಲಿಕೆ ಖಾತಾ ಸಮಸ್ಯೆ ಬಗೆಹರಿಸೋಕೆ ಎಷ್ಟೇ ಸರ್ಕಸ್ ಮಾಡಿದ್ರೂ ಪರಿಹಾರ ಸಿಗದಂತಾಗಿದೆ. ಸದ್ಯ ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತಾ ಅರ್ಜಿಗಳಿಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 46,962 ಅರ್ಜಿಗಳು ಬಂದಿದ್ದು, ಈ ಪೈಕಿ ಈಗಾಗಲೇ 39,784 ಅರ್ಜಿಗಳಿಗೆ ಅನುಮೋದನೆ ನೀಡಿ ಅಂತಿಮ ಇ-ಖಾತಾ ನೀಡಲಾಗಿದೆ. ಆದರೆ, ಇನ್ನೂ ಲಕ್ಷಗಟ್ಟಲೇ ಆಸ್ತಿ ಮಾಲೀಕರು ಇ-ಖಾತಾ ಪಡೆಯಲು ಪರದಾಡುತ್ತಿದ್ದು, ಜನರು ಸುಸ್ತಾಗಿದ್ದಾರೆ.
ಇತ್ತ ಇ-ಖಾತಾ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ ಅಂತಿರುವ ಪಾಲಿಕೆ ಇದೀಗ ಅಂಕಿ-ಅಂಶಗಳ ಪಟ್ಟಿ ರಿಲೀಸ್ ಮಾಡಿ ಕಣ್ಣೋರೆಸುವ ತಂತ್ರ ಅನುಸರಿಸುತ್ತಿದೆ. ಸದ್ಯ ಆಸ್ತಿ ತೆರಿಗೆ ರಶೀದಿ, ಮಾರಾಟ ಅಥವಾ ನೋಂದಾಯಿತ ಪತ್ರ, ಮಾಲೀಕರ ಆಧಾರ್, ಬಿಡಿಎ ಅಥವಾ ಯೋಜನಾ ಪ್ರಾಧಿಕಾರದಿಂದ ಲೇಔಟ್ ಅಥವಾ ಸೈಟ್ ಅನುಮೋದನೆ, ಬಿಬಿಎಂಪಿಯ ನಕ್ಷೆ ಅನುಮೋದನೆ ಸೇರಿ ಹಲವು ದಾಖಲೆಗಳನ್ನ ಸಲ್ಲಿಸಿ ಇ-ಖಾತಾ ಪಡೆಯೋಕೆ ಅವಕಾಶ ನೀಡಲಾಗಿದೆ. ಆದರೆ, ಇದೀಗ, ಇ-ಖಾತಾ ಸಮಸ್ಯೆ ಬಗೆಹರಿಸುತ್ತೇವೆ ಅಂತ ಅದೇ ರಾಗ ಹಾಡುತ್ತಿರುವ ಪಾಲಿಕೆ ಇನ್ನಾದರೂ ಇ-ಖಾತಾ ಸಂಕಷ್ಟಗಳನ್ನು ಬಗೆಹರಿಸಬೇಕಿದೆ.