ಬೆಂಗಳೂರು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ದರ ಏರಿಕೆಯಾಗಲಿದೆ ಎಂಬ ಸುದ್ದಿಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ ಸ್ಪಷ್ಟನೆ ನೀಡಿದ್ದು, ಇದು ಸುಳ್ಳುಸುದ್ದಿ ಎಂದು ಹೇಳಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಏಪ್ರಿಲ್ 1ರಿಂದ ಆಸ್ತಿತೆರಿಗೆ ಹೆಚ್ಚಳವಾಗಲಿದೆ ಎಂಬ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಸುಳ್ಳು ಸುದ್ದಿ. ಆಸ್ತಿ ತೆರಿಗೆ ಹೆಚ್ಚಳ ಮಾಡುತ್ತಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.
ಮೂಲಗಳ ಪ್ರಕಾರ ಕರ್ನಾಟಕದಲ್ಲಿ ಭಾರಿ ತೆರಿಗೆ ಹೆಚ್ಚಳವಾಗಲಿದೆ ಎಂದು ಇಂಡೆಕ್ಸ್.ಡೈಲಿ ಎಂಬ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಅನುರಾಗ್ ಸಿಂಗ್ ಎಂಬುವವರು ವಿಡಿಯೊ ಹರಿಯಬಿಟ್ಟಿದ್ದಾರೆ. ಬಾಡಿಗೆ ಮನೆಗಳ ಮೇಲಿನ ಆಸ್ತಿ ತೆರಿಗೆ ಎರಡು ಪಟ್ಟು, ವಾಣಿಜ್ಯ ಸಂಸ್ಥೆಗಳ ಮೇಲಿನ ತೆರಿಗೆ 3 ರಿಂದ 5 ಪಟ್ಟು ಹೆಚ್ಚಳವಾಗಲಿದೆ ಎಂಬುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತರು, ‘ಅವು ಸಂಪೂರ್ಣವಾಗಿ ಸುಳ್ಳು ಮತ್ತು ದಾರಿ ತಪ್ಪಿಸುವಂತಿದೆ. ಏಪ್ರಿಲ್ 1, 2024 ರಿಂದ ಆಸ್ತಿ ತೆರಿಗೆ ಸಂಗ್ರಹಣೆಯಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ನಾಗರಿಕ ಸಂಸ್ಥೆ ಒತ್ತಿಹೇಳಿತು, 2016 ರಲ್ಲಿ ಪರಿಷ್ಕರಿಸಲಾದ ತೆರಿಗೆ ದರಗಳು ಮುಂದುವರಿಯುತ್ತದೆ ಎಂದು ಒತ್ತಿ ಹೇಳಿದೆ.
ಹರಿದಾಡುತ್ತಿರುವುದರಿಂದ ಬಿಬಿಎಂಪಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಈ ಸಂಬಂಧ ಪತ್ರ ಬರೆದಿದ್ದು, ಸುಳ್ಳು ಮಾಹಿತಿಯ ಪ್ರಸಾರವನ್ನು ಗಮನದಲ್ಲಿಟ್ಟುಕೊಂಡು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದೆ. ಇಂತಹ ತಪ್ಪು ಮಾಹಿತಿಯಿಂದ ನಾಗರಿಕರು ದಾರಿ ತಪ್ಪಬಾರದು ಎಂದು ಬಿಬಿಎಂಪಿ ಮನವಿ ಮಾಡಿದೆ.