ಬೆಂಗಳೂರು:
ಬಸ್ ಟಿಕೆಟ್ ದರ ಹೆಚ್ಚಳ, ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳದ ನಡುವೆ ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಬೆಂಗಳೂರಿನಲ್ಲಿ ಏಪ್ರಿಲ್ 1ರಿಂದ ಪ್ರತಿ ಮನೆಯಿಂದ ಸಂಗ್ರಹಿಸುವ ಕಸಕ್ಕೂ ಶುಲ್ಕ ವಸೂಲಿಗೆ ಸರ್ಕಾರ ಅನುಮೋದನೆ ನೀಡಿದೆ. ಇದು ವಸತಿ ಸೇರಿದಂತೆ ಎಲ್ಲ ಬಗೆಯ ಕಟ್ಟಡಗಳಿಗೂ ಅನ್ವಯ ಆಗಲಿದೆ. ಕೆಜಿ ಲೆಕ್ಕದಲ್ಲಿ ಬಳಕೆದಾರರ ಶುಲ್ಕವನ್ನು ವಿಧಿಸಲಾಗುತ್ತಿದೆ. ಇದನ್ನು ಬಿಬಿಎಂಪಿ (BBMP) ವಸೂಲಿ ಮಾಡಲಿದೆ.
ತ್ಯಾಜ್ಯ ಸಂಸ್ಕರಣೆ ಮಾಡದ ಅಪಾರ್ಟ್ಮೆಂಟ್‌ಗಳು ಅಥವಾ ದೊಡ್ಡ ವಾಣಿಜ್ಯ ಸಂಸ್ಥೆಗಳಂತಹ ಬೃಹತ್ ತ್ಯಾಜ್ಯ ಉತ್ಪಾದಕರಿಂದ ಪ್ರತಿ ಕೆ.ಜಿ. ತ್ಯಾಜ್ಯಕ್ಕೆ 12 ರೂ. ಬಳಕೆದಾರ ಶುಲ್ಕ ವಿಧಿಸಲು ಸರ್ಕಾರವು ಅವಕಾಶ ನೀಡಿದೆ. ಕಟ್ಟಡದ ವಿಸ್ತೀರ್ಣದ ಆಧಾರದ ಮೇಲೆ ಬಳಕೆದಾರ ಶುಲ್ಕ ನಿರ್ಧರಿಸಲಾಗುತ್ತದೆ ಎನ್ನಲಾಗಿದೆ. 600 ಚದರ ಅಡಿ ವರೆಗಿನ ಕಟ್ಟಡಗಳು ತಿಂಗಳಿಗೆ 10 ರೂ., ವರ್ಷಕ್ಕೆ 120 ರೂ. ಪಾವತಿಸಬೇಕು. 4,000 ಚದರ ಅಡಿಗಿಂತ ದೊಡ್ಡ ಕಟ್ಟಡಗಳಿಗೆ ತಿಂಗಳಿಗೆ ಗರಿಷ್ಠ 400 ರೂ. ವರ್ಷಕ್ಕೆ 4,800 ರೂ. ಪಾವತಿಸಬೇಕಾಗಿದೆ ಎಂದು ಹೇಳಲಾಗಿದೆ.
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ಮನೆ-ಮನೆಗೆ ಕಸ ಸಂಗ್ರಹಣೆಗೆ ಬಳಕೆದಾರ ಶುಲ್ಕ ವಿಧಿಸುವ ಮೂಲಕ ವಾರ್ಷಿಕವಾಗಿ 600 ಕೋಟಿ ರೂ. ಹೆಚ್ಚುವರಿ ಆದಾಯ ಗಳಿಸುವ ನಿರೀಕ್ಷೆ ಹೊಂದಿದೆ. ಜುಲೈ 2022ರಲ್ಲಿ ಸ್ಥಾಪನೆಯಾದ ಬಿಎಸ್‌ಡಬ್ಲ್ಯೂಎಂಎಲ್, ನಗರದಲ್ಲಿ ಪ್ರತಿದಿನ ಉತ್ಪತ್ತಿಯಾಗುವ 6,000 ಟನ್ ತ್ಯಾಜ್ಯದ ಸಂಗ್ರಹಣೆ, ಸಾಗಣೆ ಮತ್ತು ವಿಲೇವಾರಿಗೆ ಜವಾಬ್ದಾರನಾಗಿದೆ. ಇದು ತ್ಯಾಜ್ಯ ಸಂಗ್ರಹಣೆಯಲ್ಲಿ ತೊಡಗಿರುವ ಆಟೋ ಟಿಪ್ಪರ್‌ಗಳಿಗೆ ವಾರ್ಷಿಕ ಸುಮಾರು 550 ಕೋಟಿ ರೂ.ಗಳನ್ನು ಖರ್ಚು ಮಾಡುತ್ತದೆ.
