ಬೆಂಗಳೂರು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪೂರ್ವ ವಲಯದ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಶುಕ್ರವಾರ ನಡೆಯಿತು. ಪೂರ್ವ ವಲಯದ ಆಯುಕ್ತೆ ಸ್ನೇಹಲ್ ಅವರು ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು.
ಚರ್ಚ್ ಸ್ಟ್ರೀಟ್ ರಸ್ತೆಯ ಸುಮಾರು 1 ಕಿ.ಮೀ. ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪೊಲೀಸ್ ಸಿಬ್ಬಂದಿ, ಪಾಲಿಕೆ ಅಧಿಕಾರಿಗಳು ಹಾಗೂ ಮಾರ್ಷಲ್‌ಗಳ ಸಹಯೋಗದಲ್ಲಿ ನಡೆಸಲಾಯಿತು.20ಕ್ಕೂ ಹೆಚ್ಚು ಗ್ಯಾಂಗ್‌ಮನ್, ಎರಡು ಟಿಪ್ಪರ್‌ಗಳು ಹಾಗೂ ಆರು ಟ್ರ್ಯಾಕ್ಟರ್‌ಗಳ ಮೂಲಕ ಪಾದಚಾರಿ ಮಾರ್ಗದಲ್ಲಿದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಯಿತು.
ಪಾದಚಾರಿ ಮಾರ್ಗ ಒತ್ತುವರಿ ಮಾಡದಂತೆ ಈಗಾಗಲೇ ಅಂಗಡಿ, ಮಳಿಗೆಗಳ ಮಾಲೀಕರಿಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೂ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿದ್ದರು. ಅದರಿಂದ ಪಾದಚಾರಿಗಳ ಓಡಾಟಕ್ಕೆ ಸಮಸ್ಯೆಯಾಗಿತ್ತು. ಚರ್ಚ್ ಸ್ಟ್ರೀಟ್‌ನ ಎರಡೂ ಬದಿಯಲ್ಲಿ ಸುಮಾರು 50 ಅಂಗಡಿ-ಮಳಿಗೆಗಳನ್ನು ತೆರೆಯಲಾಗಿತ್ತು.
ಇದೀಗ ಕಾರ್ಯಾಚರಣೆ ನಡೆಸಿದ ಪಾದಚಾರಿ ಮಾರ್ಗದಲ್ಲಿರಿಸಿದ್ದ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ ಎಂದು ಸ್ನೇಹಲ್ ತಿಳಿಸಿದರು. ಪಾದಚಾರಿ ಮಾರ್ಗದಲ್ಲಿ ಅಡುಗೆ ಮಾಡುವುದರಿಂದ ಆರೋಗ್ಯ ಮತ್ತು ನೈರ್ಮಲ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೆ, ಸಿಲಿಂಡರ್‌ಗಳನ್ನು ತೆರೆದ ಜಾಗದಲ್ಲಿ ಬಳಸುವುದರಿಂದ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚು. ಫುಟ್‌ಪಾತ್‌ಗಳು ಅತಿಕ್ರಮಣ ಗೊಂಡಿರುವುದರಿಂದ ಜನರು ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗುವ ಜತೆಗೆ ಅಪಘಾತಗಳ ಭೀತಿ ಎದುರಾಗಿದೆ. ಹಾಗಾಗಿ ಪೂರ್ವ ವಲಯದಲ್ಲಿ ಪರಿಣಾಮಕಾರಿ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಈ ನಡುವೆ ದೂರಿನ ಆಧಾರದ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೆರೆ ವಿಭಾಗ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು, ಬೆಂಗಳೂರು ಪೂರ್ವ ವಲಯದ ಕಗ್ಗದಾಸಪುರದಲ್ಲಿ 2.50 ಗುಂಟಾ ಕೆರೆ ಭೂಮಿ ಒತ್ತುವರಿ ತೆರವುಗೊಳಿಸಿ ಹಿಂಪಡೆದಿದ್ದಾರೆ. ಜೊತೆಗೆ 2 ಕೋಟಿಗೂ ಅಧಿಕ ಮೌಲ್ಯದ ಈ ಭೂಮಿಗೆ ಬೇಲಿ ಹಾಕುವ ಕೆಲಸ ಮಾಡುತ್ತಿದೆ.
ಬೆಂಗಳೂರು ಪೂರ್ವದ ಕೆರೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಕ್ಷತ್ ಅವರು ಮಾತನಾಡಿ, ಕೆರೆಯ ಮುನೇಶ್ವರ ದೇವಸ್ಥಾನದ ಬದಿಯ ಹಿಂಭಾಗದಲ್ಲಿ ಶೆಡ್‌ಗಳನ್ನು ಹಾಕಿಕೊಳ್ಳಲಾಗಿದೆ. ಇದೀಗ ಬುಲ್ಡೋಜರ್ ಬಳಸಿ ಇವುಗಳನ್ನು ತೆರವುಗೊಳಿಸಲಾಗಿದೆ. ಈ ಭೂಮಿಯ ಪ್ರಸ್ತುತ ಮಾರುಕಟ್ಟೆಯ ಮೌಲ್ಯ 2 ಕೋಟಿ ರೂ.ಗೂ ಹೆಚ್ಚಿದೆ ಎಂದು ಹೇಳಿದ್ದಾರೆ.
ಒತ್ತುವರಿ ಭೂಮಿಗೆ ಬೇಲಿ ಹಾಕುವ ಕಾರ್ಯ ನಡೆಯುತ್ತಿದ್ದು, ಕೆರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಶಾಶ್ವತ ಕಟ್ಟಡಗಳನ್ನು ತೆರವುಗೊಳಿಸಲು ವಿಶೇಷ ನ್ಯಾಯಾಲಯದ ಮೊರೆ ಹೋಗಲಾಗುತ್ತಿದೆ ಎಂದು ತಿಳಿಸಿದರು