17,000 ಕೋಟಿ ರೂ. ವೆಚ್ಚದ ಸುರಂಗ ರಸ್ತೆ ನಿರ್ಮಾಣ ಟೆಂಡರ್‌ಗೆ ಬಿಬಿಎಂಪಿ ಸಜ್ಜು

ಬೆಂಗಳೂರು:

    ಡಿಸಿಎಂ‌ ಡಿಕೆ ಶಿವಕುಮಾರ್‌  ಅವರ ಕನಸಿನ ಯೋಜನೆಯಾದ ಬೆಂಗಳೂರು ಸುರಂಗ ಮಾರ್ಗಕ್ಕೆ  ಬೃಹತ್‌ ಬೆಂಗಳೂರು ನಗರಪಾಲಿಕೆ‌ ಟೆಂಡರ್‌‌ಗೆ ಮುಂದಾಗಿದೆ. ಹೆಬ್ಬಾಳದಿಂದ ಸಿಲ್ಕ್‌‌‌ಬೋರ್ಡ್‌‌ವರೆಗೆ 16 ಕಿಲೋ ಮೀಟರ್‌‌ ಉದ್ದದ ಟನೆಲ್ ರಸ್ತೆ ಇದಾಗಿದೆ. 17,000 ಕೋಟಿ ರೂಪಾಯಿ ಅಂದಾಜು ವೆಚ್ಚದ ಈ ಸುರಂಗ ಮಾರ್ಗ ಹಲವು ವಿಶೇಷತೆಗಳನ್ನು ಹೊಂದಿದೆ ಎನ್ನಲಾಗಿದೆ.

    ಬ್ರ್ಯಾಂಡ್ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕೋದಕ್ಕೆ ಸಿದ್ಧವಾಗುತ್ತಿರುವ ಟನೆಲ್ ರಸ್ತೆ ಪ್ಲಾನ್‌ಗೆ ಇದೀಗ ಜೀವ ಸಿಕ್ಕಿದೆ. ಸುರಂಗ ಮಾರ್ಗಕ್ಕೆ ಟೆಂಡರ್ ನೀಡಲು ಪಾಲಿಕೆ ಮುಂದಾಗಿದ್ದು, ಸಂಪೂರ್ಣ ರೂಪುರೇಷೆ ಸಿದ್ಧಗೊಂಡಿದೆ. ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ 16 ಕಿಲೋ ಮೀಟರ್ ಉದ್ದದ ಟನೆಲ್ ಇದಾಗಿದ್ದು, ಅವಳಿ ಮಾರ್ಗ ಒಳಗೊಂಡಿರಲಿದೆ. ಇದರಲ್ಲಿ ಏಕಮುಖಕ್ಕೆ 3 ಪಥ ಸೇರಿದಂತೆ 6 ಪಥಗಳು ಇರಲಿವೆ. ಒಟ್ಟು 5 ಎಂಟ್ರಿ ಎಕ್ಸಿಟ್ ಇದ್ದು, ಪ್ರತಿ ಎರಡೂವರೆ ಕಿಲೋ ಮೀಟರ್‌ಗೊಂದು ಎಂಟ್ರಿ ಎಕ್ಸಿಟ್ ಇರಲಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ಟನೆಲ್‌‌ ರಸ್ತೆಗೆ ಡಿಪಿಆರ್ ಅನುಮೋದನೆ ನೀಡಿತ್ತು. 

    ಎರಡು ಪ್ಯಾಕೇಜ್‌ಗಳಲ್ಲಿ ಸುರಂಗ ನಿರ್ಮಾಣಕ್ಕೆ ಪಾಲಿಕೆ ಟೆಂಡರ್ ನೀಡಲಿದೆ. ಇದರ ನಿರ್ಮಾಣ ಉಸ್ತುವಾರಿ ಬಿ-ಸ್ಮೈಲ್ ಸಂಸ್ಥೆ ವಹಿಸಲಿದ್ದು, ಪಾಲಿಕೆ ಟೆಂಡರ್ ನೀಡಲಿದೆ. ಪ್ರತಿ ಪ್ಯಾಕೇಜ್‌ನಲ್ಲೂ 8 ಕಿಲೋ ಮೀಟರ್ ರಸ್ತೆ ನಿರ್ಮಾಣ ಆಗಲಿದ್ದು, ಹೆಬ್ಬಾಳದ ಎಸ್ಟೀಮ್ ಮಾಲ್ ಜಂಕ್ಷನ್‌ನಿಂದ ಶೇಷಾದ್ರಿ ರಸ್ತೆವರೆಗೆ ಒಂದು ಪ್ಯಾಕೇಜ್ ಹಾಗೂ ಪ್ಯಾಕೇಜ್ 2ರಲ್ಲಿ ಶೇಷಾದ್ರಿ ರಸ್ತೆಯಿಂದ ಸಿಲ್ಕ್‌ಬೋರ್ಡ್ ಜಂಕ್ಷನ್‌‌ವರೆಗೆ ಟೆಂಡರ್ ನೀಡಲಿದೆ. ಇದಕ್ಕೆ ಆರಂಭಿಕವಾಗಿ 17,780 ಕೋಟಿ ಆರಂಭಿಕ ಅನುದಾನ ವೆಚ್ಚವಾಗಲಿದೆ.

   ಈ ಜೋಡಿ ಸುರಂಗವನ್ನು 26 ತಿಂಗಳಲ್ಲಿ ಕೊರೆದು, ನಂತರ 12 ತಿಂಗಳೊಳಗೆ ನಿರ್ಮಾಣ ಪೂರ್ಣಗೊಳಿಸುವ ಯೋಜನೆ ಹಾಕಿಕೊಂಡಿದೆ ಪಾಲಿಕೆ. ಒಟ್ಟಾರೆ ರಾಜಧಾನಿಯ ಕಿಕ್ಕಿರಿದ ವಾಹನ ದಟ್ಟಣೆ ಹಾಗೂ ಟ್ರಾಫಿಕ್ ಕಿರಿಕಿರಿಗೆ ಕಡಿವಾಣ ಹಾಕೋಕೆ ಸರ್ಕಾರದ ಟನಲ್ ರಸ್ತೆಯ ಕನಸು ಕಾಣುತ್ತಿದೆ. ಆದರೆ ಟನೆಲ್ ರಸ್ತೆಯ ನಿರ್ಮಾಣವನ್ನು ಪಾಲಿಕೆ ಅಧಿಕಾರಿಗಳೇ ನಿರ್ವಹಣೆ ಮಾಡಲಿರುವುದರಿಂದ ಕಾಮಗಾರಿಯ ಗುಣಮಟ್ಟ ಹಾಗೂ ಅಂದಾಜು ಅವಧಿ ಬಗ್ಗೆ ಅನುಮಾನಗಳು ಎದ್ದಿವೆ.

Recent Articles

spot_img

Related Stories

Share via
Copy link