BVK ಅಯ್ಯಂಗಾರ್‌ ರಸ್ತೆ ವೈಟ್‌ ಟಾಪಿಂಗ್‌ ಕಾಮಗಾರಿ ಪೂರ್ಣಗೊಳಿಸಿ: BBMP ಸೂಚನೆ

ಬೆಂಗಳೂರು:

   ಡಿಸೆಂಬರ್ 15 ರೊಳಗೆ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಶುಕ್ರವಾರ ಸೂಚನೆ ನೀಡಿದ್ದಾರೆ.

   ಪಶ್ವಿಮ ವಲಯ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು, ಅಧಿಕಾರಿಗಳೊಂದಿಗೆ ಮಾತನಾಡಿದರು.

   ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಚಿಕ್ಕಪೇಟೆ ಜಂಕ್ಷನ್‌ನಿಂದ ಸುಲ್ತಾನ್‌ಪೇಟೆ ಜಂಕ್ಷನ್‌ವರೆಗೆ 190 ಮೀಟರ್‌ ಉದ್ದದ ವೈಟ್‌ಟಾಪ್‌ ಕಾಮಗಾರಿ ಪರಿಶೀಲನೆ ನಡೆಸಲಾಗಿದ್ದು, ಒಂದು ಕಡೆ ಕಾಮಗಾರಿ ಪೂರ್ಣಗೊಂಡಿದೆ. ಇನ್ನೊಂದು ಬದಿಯಲ್ಲಿ ಕಾಂಕ್ರೀಟ್ ಹಾಕಲಾಗಿದ್ದು, ಕ್ಯೂರಿಂಗ್ ಮಾಡಲಾಗುತ್ತಿದೆ. ಡಿಸೆಂಬರ್ 15ರೊಳಗೆ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸೂಚಿಸಿದರು.

   ಕಾಮಗಾರಿ ಮುಗಿದ ನಂತರ ರಸ್ತೆಯ ಮಧ್ಯದಲ್ಲಿರುವ ಹಳೆಯ ಮೀಡಿಯನ್‌ಗಳನ್ನು ತೆಗೆದು ಹೊಸ ಪ್ರಿಕಾಸ್ಟ್ ಮೀಡಿಯನ್‌ಗಳನ್ನು ಹಾಕಿ ಫುಟ್‌ಪಾತ್‌ ಸಮತಟ್ಟು ಮಾಡಬೇಕು. ಸುಲ್ತಾನಪೇಟೆ ಜಂಕ್ಷನ್ ವಿಭಾಗವನ್ನು ಕೂಡಲೇ ದುರಸ್ತಿಗೊಳಿಸಬೇಕು ಎಂದು ಸೂಚಿಸಿದರು.

    ಇದೇ ವೇಳೆ ಬಿಬಿಎಂಪಿ ಆಯುಕ್ತರು ಚಾಮರಾಜಪೇಟೆ-ಜೆಜೆಆರ್ ನಗರ ಜನರಲ್ ಆಸ್ಪತ್ರೆ ಆವರಣದಲ್ಲಿ 8 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ 100 ಹಾಸಿಗೆಗಳ ಸಾಮಾನ್ಯ ಮತ್ತು ಹೆರಿಗೆ ಆಸ್ಪತ್ರೆ ಕಟ್ಟಡಕ್ಕೂ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕಾಮಗಾರಿಯನ್ನು ತ್ವರಿತಗೊಳಿಸಿ ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪರಿಶೀಲನೆ ವೇಳೆ ಆಸ್ಪತ್ರೆ ಆವರಣದಲ್ಲಿರುವ ಮ್ಯಾನ್‌ಹೋಲ್‌ನಿಂದ ಕೊಳಚೆ ನೀರು ಸೋರಿಕೆಯಾಗುತ್ತಿರುವುದನ್ನು ಗಮನಿಸಿದ ಅವರು, ಕೂಡಲೇ ಸರಿಪಡಿಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.

    ಬಳಿಕ ಬಿನ್ನಿ ಮಿಲ್’ಗೆ ಭೇಟಿ ನೀಡಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದಿರುವ ಹೊಸ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿದರು. ಫುಟ್ ಪಾತ್, ಬೀದಿದೀಪಗಳನ್ನು ಪರಿಶೀಲಿಸಿದರು.ಗೂಡ್‌ಶೆಡ್ ರಸ್ತೆಯಲ್ಲಿರುವ ನಿರಾಶ್ರಿತರಿಗೆ ವಸತಿ ನಿಲಯವನ್ನು ಪರಿಶೀಲಿಸಿ, ಅಲ್ಲಿ ನೆಲೆಯೂರಿದ್ದವರೊಂದಿಗೆ ಮಾತನಾಡಿದರು.

   ಇನ್ನೂ 30 ಜನರಿಗೆ ಸ್ಥಳಾವಕಾಶವಿದೆ. ಮೆಜೆಸ್ಟಿಕ್ ಸುತ್ತಲಿನ ಪ್ರದೇಶದಲ್ಲಿ ವಸತಿ ರಹಿತರನ್ನು ಪತ್ತೆ ಮಾಡಿ ಅವರಿಗೆ ನಿವೇಶನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಮೆಜೆಸ್ಟಿಕ್ ನಲ್ಲಿ 350 ಮೀಟರ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಸಲಾಗುತ್ತಿದೆ. ಈಗಾಗಲೇ ಅರ್ಧ ರಸ್ತೆಗೆ ವೈಟ್ ಟಾಪಿಂಗ್ ಮಾಡಲಾಗಿದ್ದು, ಉಳಿದ ಅರ್ಧ ಭಾಗವನ್ನು ಶೀಘ್ರ ಪೂರ್ಣಗೊಳಿಸಿ ತಿಂಗಳಾಂತ್ಯದೊಳಗೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

   ಈ ಸಂದರ್ಭದಲ್ಲಿ ಜಂಟಿ ಆಯುಕ್ತ ಸಂಗಪ್ಪ, ಮುಖ್ಯ ಅಭಿಯಂತರರಾದ ಶಶಿಕುಮಾರ್, ಲೋಕೇಶ್, ಜಿಲ್ಲಾಧಿಕಾರಿ ಶ್ರೀನಿವಾಸ್, ಕಾರ್ಯಪಾಲಕ ಅಭಿಯಂತರರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link