ಏಷ್ಯಾಕಪ್ ಭಾರತಕ್ಕೆ ಹಸ್ತಾಂತರಿಸುವಂತೆ ನಖ್ವಿಗೆ ಬಿಸಿಸಿಐ ಖಡಕ್‌ ಎಚ್ಚರಿಕೆ

ನವದೆಹಲಿ:

    ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ ಮುಕ್ತಾಯಗೊಂಡು ಸರಿ ಸುಮಾರು ಒಂದು ತಿಂಗಳು ಆಗುತ್ತಾ ಬಂತು. ಆದರೂ ಟ್ರೋಫಿ ಭಾರತದ ಕೈ ಸೇರಿಲ್ಲ. ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿಗೆ ಅಧಿಕೃತ ಇಮೇಲ್ ಬರೆದು, ಏಷ್ಯಾ ಕಪ್ ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ  ತಿಳಿಸಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಇಂಡಿಯಾ ಟುಡೇ ಜತೆಗಿನ ಸಂದರ್ಶನದಲ್ಲಿ ಈ ವಿಚಾರವನ್ನು ಖಚಿತಪಡಿಸಿದ್ದಾರೆ.

   “ನಖ್ವಿಯವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ ಮತ್ತು ಅವರ ಕಡೆಯಿಂದ ಏನೂ ಪ್ರತಿಕ್ರಿಯೆ ಬಾರದೇ ಇದ್ದರೆ, ಅಧಿಕೃತ ಮೇಲ್ ಮೂಲಕ ಐಸಿಸಿಗೆ ವಿಷಯವನ್ನು ತಿಳಿಸುತ್ತೇವೆ” ಎಂದು ಹೇಳಿದರು.

   ಫೈನಲ್ ಪಂದ್ಯದ ನಂತರ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾರತ ತಂಡವು ನಖ್ವಿಯಿಂದ ಟ್ರೋಫಿಯನ್ನು ಪಡೆಯಲು ನಿರಾಕರಿಸಿತ್ತು. ಹೀಗಾಗಿ ನಖ್ವಿ ಟ್ರೋಫಿಯನ್ನು ತನ್ನ ಹೋಟೆಲ್ ರೂಮ್‌ಗೆ ಕೊಂಡೊಯ್ದಿದ್ದರು. ಸದ್ಯ ಏಷ್ಯಾಕಪ್ ಟ್ರೋಫಿ ಪ್ರಸ್ತುತ ದುಬೈನಲ್ಲಿರುವ ಎಸಿಸಿ ಕಚೇರಿಯಲ್ಲಿದೆ. 

   ಇದಕ್ಕೂ ಮೊದಲು, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ನಖ್ವಿ ಕ್ರಮಗಳನ್ನು ಟೀಕಿಸಿ, ಅನುಚಿತ ಎಂದು ಕರೆದಿದ್ದರು. “ಪಾಕಿಸ್ತಾನದ ಹಿರಿಯ ನಾಯಕರಲ್ಲಿ ಒಬ್ಬರಾದ ಎಸಿಸಿ ಅಧ್ಯಕ್ಷರಿಂದ 2025 ರ ಏಷ್ಯಾ ಕಪ್ ಟ್ರೋಫಿಯನ್ನು ಸ್ವೀಕರಿಸದಿರಲು ನಾವು ನಿರ್ಧರಿಸಿದ್ದೇವೆ. ಅದು ಪ್ರಜ್ಞಾಪೂರ್ವಕ ನಿರ್ಧಾರವಾಗಿತ್ತು” ಎಂದು ಸೈಕಿಯಾ ಹೇಳಿದರು.

   “ನಖ್ವಿ ನಿರ್ಧಾರ ಅತ್ಯಂತ ದುರದೃಷ್ಟಕರ ಮತ್ತು ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿದೆ. ಟ್ರೋಫಿ ಮತ್ತು ಪದಕಗಳನ್ನು ಆದಷ್ಟು ಬೇಗ ಭಾರತಕ್ಕೆ ಹಿಂದಿರುಗಿಸಲಾಗುವುದು ಎಂದು ನಾವು ಭಾವಿಸುತ್ತೇವೆ” ಎಂದು ಸೈಕಿಯಾ ಹೇಳಿದರು.

Recent Articles

spot_img

Related Stories

Share via
Copy link