ನವದೆಹಲಿ:
ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ BCCI ನಿರೀಕ್ಷೆಯಂತೆ ಡ್ರೀಮ್ 11 ಜೊತೆಗಿನ ಒಪ್ಪಂದವನ್ನು ಕಡಿದುಕೊಂಡಿದೆ. ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ ಅಂಗೀಕಾರವಾದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡ್ರೀಮ್ ಇಲೆವೆನ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡ ಬಳಿಕ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಬಿಸಿಸಿಐ, ಮತ್ತೆ ಎಂದಿಗೂ ಇಂತಹ ಕಂಪನಿಗಳೊಂದಿಗೆ ಸಹಭಾಗಿತ್ವ ವಹಿಸುವುದಿಕೈಜೋಡಿಸುವುದಿಲ್ಲ ಎಂದು ಹೇಳಿಕೊಂಡಿದೆ. ಡ್ರೀಮ್ 11 ಜೊತೆಗಿನ ಒಪ್ಪಂದವನ್ನು ಮುರಿದುಕೊಂಡ ನಂತರ ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ದೇವ್ಜಿತ್ ಸೈಕಿಯಾ ಅವರು, ‘ನಾವು ಭವಿಷ್ಯದಲ್ಲಿ ಇಂತಹ ಕಂಪನಿಗಳೊಂದಿಗೆ ಕೆಲಸ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.
ವಾಸ್ತವವಾಗಿ ಡ್ರೀಮ್11 ಮತ್ತು ಬಿಸಿಸಿಐ ನಡುವೆ 2023 ರಲ್ಲಿ ಒಪ್ಪಂದ ನಡೆದಿತ್ತು. ಈ ಒಪ್ಪಂದದ ಪ್ರಕಾರ, 2026 ರವರೆಗೆ ಡ್ರೀಮ್11 ಬಿಸಿಸಿಐಗೆ 358 ಕೋಟಿ ರೂ.ಗಳನ್ನು ಪಾವತಿಸಬೇಕಾಗಿತ್ತು. ಆದರೆ ಈಗ ಈ ಒಪ್ಪಂದವನ್ನು ಮಧ್ಯದಲ್ಲಿಯೇ ಕಡಿದುಕೊಳ್ಳಲಾಗಿದೆ. ಇದೀಗ ಡ್ರೀಮ್11 ಜೊತೆ ಒಪ್ಪಂದ ಮುರಿದುಕೊಂಡಿರುವ ಬಿಸಿಸಿಐ, ಏಷ್ಯಾಕಪ್‌ಗೂ ಮೊದಲು ಯಾವ ಕಂಪನಿ ಜೊತೆ ಕೈಜೋಡಿಸುತ್ತದೆ ಎಂಬುದು ಕುತೂಹಲಕಾರಿಯಾಗಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಡ್ರೀಮ್11ನ ಪ್ರತಿನಿಧಿಗಳು ಮುಂಬೈನಲ್ಲಿರುವ ಬಿಸಿಸಿಐ ಕಚೇರಿಗೆ ಬಂದು ಈ ಒಪ್ಪಂದವನ್ನು ಕೊನೆಗೊಳಿಸುವ ನಿರ್ಧಾರದ ಬಗ್ಗೆ CEO ಹೇಮಾಂಗ್ ಅಮೀನ್ ಅವರಿಗೆ ಮಾಹಿತಿ ನೀಡಿದ್ದಾರೆ. ಈ ಕಾರಣದಿಂದಾಗಿ ಡ್ರೀಮ್ 11 ಏಷ್ಯಾಕಪ್‌ನಲ್ಲಿ ಭಾರತ ತಂಡದ ಪ್ರಾಯೋಜಕರಾಗಿರುವುದಿಲ್ಲ. ಹೀಗಾಗಿ ಬಿಸಿಸಿಐ ಶೀಘ್ರದಲ್ಲೇ ಹೊಸ ಟೆಂಡರ್ ನೀಡಲಿದೆ ಎಂದು ಬಿಸಿಸಿಐ ಮೂಲವನ್ನು ಉಲ್ಲೇಖಿಸಿ ವರದಿ ಮಾಡಿದೆ.
ಜುಲೈ 2023 ರಲ್ಲಿ ಡ್ರೀಮ್11 ಬಿಸಿಸಿಐ ಜೊತೆ 358 ಕೋಟಿ ರೂಪಾಯಿಗಳ ಬೃಹತ್ ಒಪ್ಪಂದ ಮಾಡಿಕೊಂಡಿತ್ತು. ಇದರ ಅಡಿಯಲ್ಲಿ, ಡ್ರೀಮ್11 ಭಾರತೀಯ ಮಹಿಳಾ ತಂಡ, ಭಾರತೀಯ ಪುರುಷರ ತಂಡ, ಭಾರತ ಅಂಡರ್-19 ತಂಡ ಮತ್ತು ಭಾರತ-ಎ ತಂಡದ ಕಿಟ್‌ಗಳ ಪ್ರಾಯೋಜಕ ಹಕ್ಕುಗಳನ್ನು ಪಡೆದುಕೊಂಡಿತು. ಆದರೀಗ ಈ ಒಪ್ಪಂದವನ್ನು ಅವಧಿಗೂ ಮುನ್ನವೇ ಕೊನೆಗೊಳಿಸಲಾಗಿದೆ.
ಒಪ್ಪಂದವನ್ನು ಅವಧಿಗೂ ಮುನ್ನವೇ ಕೊನೆಗೊಳಿಸಿದ್ದರೂ, ಡ್ರೀಮ್11 ಯಾವುದೇ ರೀತಿಯ ದಂಡವನ್ನು ಪಾವತಿಸಬೇಕಾಗಿಲ್ಲ. ಏಕೆಂದರೆ ಭಾರತ ಸರ್ಕಾರದ ಹೊಸ ಕಾನೂನು, ಕಂಪನಿಯ ಮುಖ್ಯ ವ್ಯವಹಾರದ ಮೇಲೆ ಪರಿಣಾಮ ಬೀರಿದರೆ, ಕಂಪನಿಯು ಮಂಡಳಿಗೆ ಯಾವುದೇ ದಂಡವನ್ನು ಪಾವತಿಸುವಂತಿಲ್ಲ ಎಂಬುದನ್ನು ಒಪ್ಪಂದದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಟೀಂ ಇಂಡಿಯಾದ ಜೆರ್ಸಿಯ ಮೇಲೆ ಯಾವ ಕಂಪನಿಯ ಹೆಸರು ಇರುತ್ತದೆ ಎಂಬುದಕ್ಕೆ ಉತ್ತರ ಶೀಘ್ರದಲ್ಲೇ ಸಿಗಲಿದೆ. ಏಕೆಂದರೆ ವರದಿಗಳ ಪ್ರಕಾರ, ಅನೇಕ ದೊಡ್ಡ ಕಂಪನಿಗಳು ಬಿಸಿಸಿಐ ಜೊತೆ ಒಪ್ಪಂದ ಮಾಡಿಕೊಳ್ಳಲು ಸಿದ್ಧವಾಗಿವೆ. ಇದರಲ್ಲಿ ಟಾಟಾ, ರಿಲಯನ್ಸ್, ಅದಾನಿ ಮುಂತಾದ ದೊಡ್ಡ ಹೆಸರುಗಳು ಸೇರಿವೆ. ಟಾಟಾ ಈಗಾಗಲೇ ಐಪಿಎಲ್‌ನ ಪ್ರಾಯೋಜಕರಾಗಿದ್ದರೆ, ರಿಲಯನ್ಸ್ ಜಿಯೋ ಪ್ರಸಾರದಲ್ಲಿಯೂ ತೊಡಗಿಸಿಕೊಂಡಿದೆ. ಈ ಕಂಪನಿಗಳಲ್ಲದೆ, ಗ್ರೋ, ಜೆರೋಧಾದಂತಹ ಕಂಪನಿಗಳು ಸಹ ಈ ಒಪ್ಪಂದವನ್ನು ಮಾಡಬಹುದು. ಮಹೀಂದ್ರಾ ಮತ್ತು ಟೊಯೋಟಾದಂತಹ ದೊಡ್ಡ ಆಟೋಮೊಬೈಲ್ ಕಂಪನಿಗಳು ಸಹ ಬಿಸಿಸಿಐ ಜೊತೆ ಒಪ್ಪಂದ ಮಾಡಿಕೊಳ್ಳಬಹುದು. ಪೆಪ್ಸಿ ಕೂಡ ಈ ರೇಸ್‌ನಲ್ಲಿದೆ ಎಂದು ಹೇಳಲಾಗುತ್ತಿದೆ.








