ಹೊರರಾಜ್ಯಕ್ಕೆ ಪ್ರವಾಸ ಹೋಗೋ ಮುನ್ನ ಎಚ್ಚರ… ಎಚ್ಚರ!

ಶಿರಸಿ: 

    ರಾತ್ರಿ ವೇಳೆ ಸಂಚರಿಸುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಅದು ನಮ್ಮ ರಾಜ್ಯದಲ್ಲಾಗಿರಲಿ ಅಥವಾ ಹೊರ ರಾಜ್ಯಕ್ಕೆ ತೆರಳುವುದಾಗಿರಲಿ, ಎಚ್ಚರಿಕೆ ಬಹಳ ಮುಖ್ಯ. ಬೇರೆ ರಾಜ್ಯವಾಗಿದ್ದರೆ ಅಲ್ಲಿನ ಸ್ಥಳದ ಬಗ್ಗೆ ಪರಿಚಯ ಇರೋದಿಲ್ಲ ಅಲ್ಲದೆ ಭಾಷೆ ಸಮಸ್ಯೆಯೂ ಉಂಟಾಗುತ್ತದೆ. ಪ್ರವಾಸಿಗರಾಗಿ  ತೆರಳುವವರಿಗೆ ಅಲ್ಲಿ ಯಾವೆಲ್ಲಾ ಕೃತ್ಯಗಳು ನಡೆಯುತ್ತವೆ ಎಂಬ ಬಗ್ಗೆ ತಿಳಿದಿರುವುದಿಲ್ಲ. ನೀವು ಕೂಡ ಹೊರ ರಾಜ್ಯಕ್ಕೆ ಪ್ರವಾಸಕ್ಕೆ ಹೋಗುತ್ತಿದ್ದೀರಿ, ಮಧ್ಯರಾತ್ರಿ ಸಂಚಾರ ಮಾಡುವಿರಿ ಅಂತಾದ್ರೆ ಈ ಸ್ಟೋರಿ ಓದಲೇಬೇಕು .

   ಉತ್ತರ ಕನ್ನಡ ಜಿಲ್ಲೆಯ ಕುಮಟಾ ಕತಗಾಲ ಮಾಸ್ತಿಹಳ್ಳ ಮೂಲದ ಕುಟುಂಬವೊಂದು ಮಹಾರಾಷ್ಟ್ರಕ್ಕೆ ತೀರ್ಥಯಾತ್ರೆಗೆ ತೆರಳಿತ್ತು. ದೇವರ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದಾಗ ಭಯಾನಕ ಘಟನೆ ನಡೆದಿದೆ. ಅದೃಷ್ಟವಶಾತ್ ಕೂದಲೆಳೆ ಅಂತರದಿಂದ ಇವರು ಪಾರಾಗಿದ್ದಾರೆ. ಮಹಾರಾಷ್ಟ್ರದ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ದರೋಡೆಕೋರರು ಲೂಟಿಗೆ ಯತ್ನಿಸಿದ್ದು, ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ.

   ಹೌದು, ಕುಟುಂಬವೊಂದು ಶಿರಡಿ ಹಾಗೂ ಅಯೋಧ್ಯೆ ಪ್ರವಾಸಕ್ಕೆ ತೆರಳಿತ್ತು. ಸ್ಥಳೀಯ ಗಜಾನನ ಟ್ರಾವೆಲ್ಸ್‌ನ ಟಿಟಿ ವಾಹನದಲ್ಲಿ ತೀರ್ಥಯಾತ್ರೆ ಹೊರಟು ಊರಿಗೆ ಮರಳುತ್ತಿದ್ದರು. ಈ ವೇಳೆ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಪ್ರವಾಸ ಮುಗಿಸಿ ಊರಿಗೆ ವಾಪಸ್ಸಾಗುತ್ತಿದ್ದಾಗ, ಶುಕ್ರವಾರ ರಾತ್ರಿ ಸೊಲ್ಲಾಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ದರೋಡೆಕೋರರ ಗುಂಪೊಂದು ದಾಳಿ ಮಾಡಿದೆ. 

   ಮೂರು ಬೈಕ್‍ಗಳಲ್ಲಿ ಬಂದ ದುಷ್ಕರ್ಮಿಗಳು, ಟಿಟಿ ವಾಹನವನ್ನು ಹಿಂಬಾಲಿಸಿದ್ದಾರೆ. ಚಲಿಸುತ್ತಿದ್ದ ವಾಹನದ ಹಿಂದಿನ ಬಾಗಿಲಿಗೆ ಜಿಗಿದು ಒಳನುಗ್ಗಿದ್ದಾರೆ. ಬಳಿಕ ಹಿಂಬದಿಯಲ್ಲಿದ್ದ ಬ್ಯಾಗ್‌ಗಳನ್ನು ಎಳೆದು ಹೊರಗೆಸೆದಿದ್ದಾರೆ. ನಡೆದ ಈ ಘಟನೆಯಿಂದ ವಾಹನದಲ್ಲಿದ್ದವರು ತೀವ್ರ ಆತಂಕಕ್ಕೆ ಒಳಗಾಗಿದ್ದರು.

  ದರೋಡೆಕೋರರ ಕೃತ್ಯವನ್ನು ಗಮನಿಸಿದ ಚಾಲಕ ಗಣಪತಿ ನಾಯ್ಕ್ ಸಮಯಪ್ರಜ್ಞೆ ಮೆರೆದಿದ್ದಾರೆ. ಕೂಡಲೇ ಅವರು ವಾಹನವನ್ನು ನಿಲ್ಲಿಸಿದ್ದಾರೆ. ಈ ವೇಳೆ ಕಳ್ಳರು ಇಡೀ ವಾಹನವನ್ನೇ ಸುತ್ತುವರಿದು ದಾಳಿ ಮಾಡಲು ಮುಂದಾಗಿದ್ದಾರೆ. ಆದರೂ, ಧೃತಿಗೆಡದ ಚಾಲಕ ವಾಹನದಲ್ಲಿ ಅಡುಗೆಗೆ ಇಟ್ಟಿದ್ದ ಆಯುಧವನ್ನು ಕೈಯಲ್ಲಿ ಹಿಡಿದುಕೊಂಡು ದುಷ್ಕರ್ಮಿಗಳನ್ನು ಹೆದರಿಸಲು ಮುಂದಾಗಿದ್ದಾರೆ.

   ಚಾಲಕನ ಧೈರ್ಯವನ್ನು ಕಂಡು ದರೋಡೆಕೋರರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಕಳ್ಳರು ಅವರ ಬ್ಯಾಗ್‍ಗಳನ್ನು ದೋಚಿ ಪರಾರಿಯಾಗಿದ್ದಾರೆ. ಆದರೆ, ಬ್ಯಾಗ್‍ಗಳಲ್ಲಿ ಬಟ್ಟೆಗಳಿದ್ದವೇ ಹೊರತು ಯಾವುದೇ ನಗದು ಅಥವಾ ಚಿನ್ನಾಭರಣ ಇರಲಿಲ್ಲ. ಅದೃಷ್ಟವಶಾತ್ ಕುಟುಂಬವು ಪ್ರಾಣಾಪಾಯದಿಂದ ಪಾರಾಗಿದೆ. ಯಾವುದೇ ಪೊಲೀಸ್ ದೂರು ನೀಡದೆ ತಮ್ಮ ಊರಿಗೆ ಪ್ರಯಾಣ ಮುಂದುವರಿಸಿ, ಸುರಕ್ಷಿತವಾಗಿ ಮರಳಿದ್ದಾರೆ.

   ಪ್ರವಾಸಕ್ಕೆ ಹೋಗುವವರು ಬಹಳ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ವಿಶೇಷವಾಗಿ ಮಹಾರಾಷ್ಟ್ರದ ರಾಷ್ಟ್ರೀಯ ಹೆದ್ದಾರಿ 52 ರ ಸೊಲ್ಲಾಪುರ ಭಾಗದಲ್ಲಿ ಇಂತಹ ಘಟನೆಗಳು ಹೊಸದಲ್ಲ. ಇಲ್ಲಿ ದರೋಡೆಯು ಸರ್ವೇ ಸಾಮಾನ್ಯವಾಗಿದೆ ಎಂಬ ದೂರುಗಳು ಕೇಳಿಬಂದಿವೆ. ಈ ಹಿಂದೆಯೂ ಕರ್ನಾಟಕದ ಪ್ರವಾಸಿಗರಿಗೆ ಇದೇ ರೀತಿ ದರೋಡೆಯ ಅನುಭವವಾಗಿದೆ ಎಂದು ತಿಳಿದುಬಂದಿದೆ. ರಾತ್ರಿ ವೇಳೆ ಸಂಚರಿಸುವ ಪ್ರವಾಸಿ ವಾಹನಗಳೇ ಇವರ ಗುರಿಯಾಗಿದೆ. ಹೀಗಾಗಿ ಆದಷ್ಟು ಎಚ್ಚರ ವಹಿಸುವುದು ಮುಖ್ಯ.

Recent Articles

spot_img

Related Stories

Share via
Copy link