ಬೆಂಗಳೂರು
ಬಿಸಿಲಿನಿಂದ ಬಸವಳಿದ ಸಿಲಿಕಾನ್ ಸಿಟಿ ಜನರಿಗೆ ವರುಣ ತಂಪೆರಿದಿದ್ದಾನೆ. ಸೋಮವಾರ ನಗರದ ಹಲವೆಡೆ ಆಲಿಕಲ್ಲು, ಗುಡುಗು ಸಿಡಿಲು ಸಹಿತ ಭರ್ಜರಿ ಮಳೆಯಾಗಿದೆ. ಸದ್ಯ ಇಂದು ಮೇ 07 ಮಂಗಳವಾರ ಬೆಳಗಿನ ವಾತಾವರಣ ತಂಪಾಗಿದ್ದು, ಮೇ 10ರ ವರೆಗೂ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರದಲ್ಲಿ ಇನ್ನೂ ಮೂರು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ನಗರದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 37 ಡಿಗ್ರಿ ಸೆಲ್ಸಿಯಸ್ ಮತ್ತು 24 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಕೂಡ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಇನ್ನು ನಿನ್ನೆಯಂತೆ ಇಂದು ಕೂಡ ಸಂಜೆ ಭರ್ಜರಿ ಮಳೆಯಾಗಲಿದ್ದು, ಬೆಂಗಳೂರು ಜನರು ಸಂಜೆ ವೇಳೆ ಮನೆ ಬಿಡುವ ಮುನ್ನ ಎಚ್ಚರ ವಹಿಸಬೇಕಾಗಿದೆ. ನಗರದಲ್ಲಿ ಮಳೆಯಾದರೆ ಅದರ ನೇರ ಪರಿಣಾಮ ವಾಹನ ಸವಾರರ ಮೇಲೆ ಬೀರುತ್ತದೆ. ಮಳೆಯಾಗುತ್ತಿದ್ದಂತೆ ನಗರದಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗುತ್ತದೆ. ಹೀಗಾಗಿ ಇಂದು ಕೂಡ ಮಳೆಯಾದರೆ ನಗರ ಮೆಜೆಸ್ಟಿಕ್, ಕೆ.ಆರ್ ಮಾರ್ಕೆಟ್, ರಾಜಾಜಿನಗರ, ಮಲ್ಲೇಶ್ವರಂ, ಕೆ.ಆರ್ ಪುರಂ, ಹೊಸಕೋಟೆ, ಆರ್.ಆರ್ ನಗರ, ಕೆಂಗೇರಿ, ಮೈಸೂರು ರೋಡ್, ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ ಹಾಗೂ ಯಶವಂತಪುರ ಸೇರಿದಂತೆ ಹಲವು ಭಾಗಗಳಲ್ಲಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದ್ದು ವಾಹನ ಸವಾರರು ಎಚ್ಚರ ವಹಿಸಬೇಕಾಗಿದೆ.
ಇನ್ನು ನಿನ್ನೆ ಸಂಜೆ ಆಲಿಕಲ್ಲು, ಗುಡುಗು ಸಿಡಿಲು ಸಹಿತ ಭರ್ಜರಿ ಮಳೆಯಾಗಿದೆ. ಜೊತೆಗೆ ಕೆಲವು ಭಾಗಗಳಲ್ಲಿ ಗಾಳಿಯ ಅಬ್ಬರ ಕೂಡ ಜೋರಾಗಿದ್ದು, ಒಂದೇ ಮಳೆಗೆ ನಗರದಲ್ಲಿ ಒಟ್ಟು 25ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ ಮಾಹಿತಿ ಪ್ರಕಾರ ರಾಜಮಹಲ್ ಗುಟ್ಟಹಳ್ಳಿಯಲ್ಲಿ ಗರಿಷ್ಠ 39.5 ಮಿಮೀ ಮಳೆಯಾಗಿದ್ದು, ಯಾನಂದ ನಗರದಲ್ಲಿ (32.5 ಮಿಮೀ) ಮಳೆಯಾಗಿದೆ. ಹಾಗೂ ನಗರದ 18 ವಾರ್ಡ್‌ಗಳಲ್ಲಿ 10 ಮಿಮೀಗೂ ಹೆಚ್ಚು ಮಳೆಯಾಗಿದೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ