ಕಾರವಾರ : 200ರೂರ ಗಡಿ ದಾಟಿದ ಬೀನ್ಸ್‌ ದರ ….!

ಕಾರವಾರ: 

    ಅತಿಯಾದ ಬಿಸಿಲು, ಹೆಚ್ಚಿದ ಆರ್ದ್ರತೆಯಿಂದ ಕಂಗೆಟ್ಟಿರುವ ಕರಾವಳಿ ಭಾಗದ ಜನತೆಗೆ ತರಕಾರಿ, ಹಣ್ಣಿನ ದರದ ಬಿಸಿಯೂ ತಟ್ಟಿದೆ. ಶತಕದ ಆಸುಪಾಸಿನಲ್ಲಿದ್ದ ಬೀನ್ಸ್ ದರವು ಏಕಾಏಕಿ ದ್ವಿಶತಕ ದಾಟಿರುವುದು ಗ್ರಾಹಕರನ್ನು ಚಿಂತೆಗೀಡು ಮಾಡಿದೆ.

    ನಗರವೂ ಸೇರಿದಂತೆ ಜಿಲ್ಲೆಯ ಬಹುತೇಕ ಮಾರುಕಟ್ಟೆಗೆ ಬೆಳಗಾವಿ, ಹುಬ್ಬಳ್ಳಿ ಭಾಗದಿಂದ ತರಕಾರಿ, ಹಣ್ಣು ಪೂರೈಕೆ ಆಗುತ್ತಿದೆ. ಬಿಸಿಲ ಝಳ ಹೆಚ್ಚಿದ ಬಳಿಕ ಬೇಡಿಕೆಯಲ್ಲಿರುವ ತರಕಾರಿ, ಹಣ್ಣುಗಳ ದರ ವಿಪರೀತ ಏರಿಕೆ ಕಂಡಿದೆ. ಕಳೆದ ಎರಡು ವಾರಗಳಿಂದ ಈಚೆಗೆ ದರದಲ್ಲಿ ಮತ್ತಷ್ಟು ವ್ಯತ್ಯಾಸ ಕಂಡಿದೆ ಎನ್ನುತ್ತಿದ್ದಾರೆ ವ್ಯಾಪಾರಿಗಳು.

    ಬೇಸಿಗೆ ಆರಂಭಕ್ಕೂ ಮೊದಲು ಪ್ರತಿ ಕೆ.ಜಿಗೆ ಸರಾಸರಿ ₹80-100 ದರದ ಆಸುಪಾಸಿನಲ್ಲಿ ಮಾರಾಟ ಕಾಣುತ್ತಿದ್ದ ಬೀನ್ಸ್ ಈಗ ಕೆ.ಜಿವೊಂದಕ್ಕೆ ₹200ಕ್ಕೆ ಮಾರಾಟವಾಗುತ್ತಿದೆ. ಕೆ.ಜಿ ಲೆಕ್ಕದಲ್ಲಿ ಖರೀದಿಸುತ್ತಿದ್ದ ಗ್ರಾಹಕರು ಗ್ರಾಂ ಲೆಕ್ಕದಲ್ಲಿ ಖರೀದಿ ಮಾಡುವ ಸ್ಥಿತಿಗೆ ಬಂದಿದೆ.

    ‘ಬಹುತೇಕ ತರಕಾರಿಗಳು ಬೆಳಗಾವಿ, ದಕ್ಷಿಣ ಮಹಾರಾಷ್ಟ್ರದ ಜಿಲ್ಲೆಗಳಿಂದ ಪೂರೈಕೆ ಆಗುತ್ತವೆ. ಬೀನ್ಸ್ ಸೇರಿದಂತೆ ಬಹುತೇಕ ತರಕಾರಿಗಳನ್ನು ಬೆಳೆಯುವ ಪ್ರದೇಶದಲ್ಲಿ ನೀರಿನ ಕೊರತೆ ಉಂಟಾಗಿದ್ದರಿಂದ ಇಳುವರಿಯೂ ಕುಸಿತವಾಗಿದೆ. ಹೀಗಾಗಿ, ಬೇಡಿಕೆಯಷ್ಟು ತರಕಾರಿ ಪೂರೈಕೆ ಆಗುತ್ತಿಲ್ಲ. ಬೀನ್ಸ್ನಂತಹ ಹೆಚ್ಚು ನೀರು ಬೇಕಿರುವ ತರಕಾರಿಗಳ ಬೆಳೆ ಅರ್ಧಕ್ಕಿಂತ ಕಡಿಮೆ ಪ್ರಮಾಣಕ್ಕೆ ಕುಸಿದಿದೆ. ಇದೇ ದರ ಏರಿಕೆಗೆ ಕಾರಣವಾಗಿರಬಹುದು’ ಎನ್ನುತ್ತಾರೆ ತರಕಾರಿ ವ್ಯಾಪಾರಿ ಸಂಗಮೇಶ ಕಲ್ಯಾಣಿ.

   ಕೇವಲ ತರಕಾರಿ ಮಾತ್ರವಲ್ಲದೆ ಹಣ್ಣಿನ ದರದಲ್ಲೂ ಭಾರಿ ವ್ಯತ್ಯಾಸ ಉಂಟಾಗಿದೆ. ಏಪ್ರಿಲ್, ಮೇ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಲ್ಲಿರುತ್ತಿದ್ದ ಕರಿ ಇಷಾಡ ಮಾವಿನ ಹಣ್ಣು ಈ ಬಾರಿ ಮಾರುಕಟ್ಟೆಗೆ ಅಷ್ಟಾಗಿ ಬಂದಿಲ್ಲ. ಬೆರಳೆಣಿಕೆಯಷ್ಟು ವ್ಯಾಪಾರಿಗಳು ಮಾತ್ರ ಮಾರಾಟಕ್ಕೆ ತರುತ್ತಿದ್ದಾರಾದರೂ ಕೆಲವೇ ಗಂಟೆಯಲ್ಲಿ ಖರ್ಚಾಗುತ್ತಿದೆ. ಪ್ರತಿ ಡಜನ್ ಹಣ್ಣು ₹1 ಸಾವಿರ ಬೆಲೆಗೆ ಮಾರಾಟ ಕಾಣುತ್ತಿದೆ. 

   ತಿಂಗಳ ಹಿಂದೆ ಕೆ.ಜಿ.ಗೆ ಸರಾಸರಿ ₹120-140 ದರದಲ್ಲಿದ್ದ ದಾಳಿಂಬೆ ದರ ಈಗ ₹160ಕ್ಕೆ ತಲುಪಿದೆ. ₹160 ಇದ್ದ ಸೇಬು ಹಣ್ಣಿನ ದರ ₹220 ರಿಂದ 280ರ ವರೆಗೂ ದಾಟಿದೆ. ಕಿತ್ತೆಳೆ ಹಣ್ಣಿನ ದರ ಪ್ರತಿ ಕೆ.ಜಿಗೆ ₹60, ಮೋಸಂಬಿ ದರ ₹20 ರಷ್ಟು ಏರಿಕೆಯಾಗಿದೆ. ಆಪೂಸ್ ತಳಿಯ ಮಾವು ಕೆ.ಜಿಗೆ ₹120 ರಿಂದ 150 ದರಕ್ಕೆ ಮಾರಾಟವಾಗುತ್ತಿದೆ.

   ‘ಪ್ರತಿ ಬೇಸಿಗೆಯಲ್ಲೂ ಹಣ್ಣುಗಳ ದರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಆಗುತ್ತಿತ್ತು. ಇದೇ ಮೊದಲ ಬಾರಿಗೆ ನಿರೀಕ್ಷೆಗೂ ಮೀರಿ ದರ ಏರಿಕೆ ಕಂಡಿದೆ. ದರ ಹೆಚ್ಚಳವಾಗಿರುವುದರಿಂದ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ’ ಎಂದು ಹಣ್ಣಿನ ವ್ಯಾಪಾರಿ ಮಹ್ಮದ್ ಜಾಫರ್ ಪ್ರತಿಕ್ರಿಯಿಸಿದರು..

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap