ತುರುವೇಕೆರೆ:
ತಾಲ್ಲೂಕಿನ ದಂಡಿನಶಿವರ ಹೋಬಳಿಯ ಹುಲೇಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಸಾಸಲು ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡು ಆಸುಪಾಸಿನ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಸಾಸಲು ಗ್ರಾಮದ ರೈತರೊಬ್ಬರು ಭಾನುವಾರ ಬೆಳಿಗ್ಗೆ ತಮ್ಮ ತೋಟಕ್ಕೆ ತೆರಳಿದ ವೇಳೆ ಅಲ್ಲಿನ ಬಾಳೆಗಿಡದಲ್ಲಿ ನಿತ್ರಾಣಗೊಂಡ ಸ್ಥಿತಿಯಲ್ಲಿ ಕರಡಿ ಮಲಗಿದ್ದನ್ನು ಕಂಡು ಹೆದರಿ ಓಡಿ ಹೋಗಿ ಗ್ರಾಮದವರಿಗೆ ತಿಳಿಸಿದ್ದಾನೆ.
ವಿಷಯ ತಿಳಿದ ಸಾಸಲು ಗ್ರಾಮದ ಆಸುಪಾಸಿನ ಜನರು ತಂಡೋಪ ತಂಡವಾಗಿ ಕರಡಿ ಇರುವ ಸ್ಥಳಕ್ಕೆ ತೆರಳುತ್ತಿದ್ದಂತೆ ಜನರ ಗದ್ದಲವನ್ನು ಕಂಡು ಕರಡಿ ಪೊದೆಯೊಳಗೆ ಅವಿತುಕೊಂಡಿದೆ. ಆ ವೇಳೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗು ದಂಡಿನಶಿವರ ಪೊಲೀಸರು ಕರಡಿ ನೋಡಲು ಬಂದಿದ್ದ ಜನರನ್ನು ಚದುರಿಸಿದ್ದಾರೆ.
ಸಂಜೆಯಾಗುತ್ತಿದ್ದಂತೆ ಕರಡಿ ಸ್ಥಳದಿಂದ ಓಡಿ ಹೋಗಿದ್ದು ಜನರಲ್ಲಿ ಮತ್ತೂ ಆತಂಕ ಹೆಚ್ಚಿಸಿದ್ದು ಹುಲ್ಲೇಕೆರೆ ಮತ್ತು ದಂಡಿನಶಿವರ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಕರಡಿ ಬಂದಿರುವ ಬಗ್ಗೆ ಎಚ್ಚರಿಕೆ ಮೂಡಿಸಿ ಸಂಜೆ ಮತ್ತು ಮುಂಜಾನೆ ಒಂಟಿಯಾಗಿ ತೋಟ, ಹೊಲ ಗದ್ದೆಗಳಿಗೆ ಹೋಗದಂತೆ ಎಚ್ಚರಿಸಿದ್ದಾರೆ.
ಸುಮಾರು 12 ವರ್ಷದ ಈ ಕರಡಿಯಿಂದ ಜನರಿಗೆ ಅಂತಹ ತೊಂದರೆಯೇನೂ ಆಗುವುದಿಲ್ಲ. ಸಾಸಲು ಕೆರೆ ಹತ್ತಿರ ಕರಡಿ ಸೆರೆ ಹಿಡಿಯಲು ಬೋನನ್ನು ಹಿಡಲಾಗಿದೆ. ಹುಲ್ಲೇಕೆರೆ, ಸಾಸಲು ಮತ್ತು ಅರಕೆರೆ ಸುತ್ತಮುತ್ತ ಕರಡಿ ಇರುವ ಬಗ್ಗೆ ಮೈಕ್ ಮೂಲಕ ಜಾಗೃತಿ ಮೂಡಿಸಲಾಗಿದೆಂದು ಅರಣ್ಯ ಇಲಾಖೆಯ ಆರ್‍ಎಫ್‍ಓ ಸುನಿಲ್‍ಕುಮಾರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ