ತುಮಕೂರು :
ನಗರದ ಹೊರ ವಲಯದ ಸಿದ್ದಗಂಗಾ ಮಠದ ಸುತ್ತಮುತ್ತ ಹಲವು ದಿನಗಳಿಂದ ಕರಡಿಯೊಂದು ಕಾಣಿಸಿಕೊಳ್ಳುತ್ತಾ ಜನರಲ್ಲಿ ಭೀತಿ ಹುಟ್ಟಿಸಿತ್ತು. ಬೆಳಗಿನ ಹಾಗೂ ರಾತ್ರಿ ವೇಳೆ ಆ ಭಾಗದಲ್ಲಿ ಹೋಗಿಬರುವ ಅನೇಕರಿಗೆ ಈ ಕರಡಿ ಕಾಣಿಸಿಕೊಂಡಿತ್ತು. ಸಾಮಾಜಿಕ ಜಾಲತಾಣದಲ್ಲಿಯೂ ಕೆಲವರು ಹರಿಯಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕರಡಿ ಹಿಡಿಯಲು ಅರಣ್ಯ ಇಲಾಖೆಯು ಬೋನ್ ಅಳವಡಿಸಿತ್ತು. ಇಟ್ಟಿದ್ದ ಬೋನಿಗೆ ಶನಿವಾರ ರಾತ್ರಿ ಕರಡಿ ಸಿಕ್ಕಿಬಿದ್ದಿದೆ.
ಕಳೆದ ನಾಲ್ಕೈದು ತಿಂಗಳಿಂದ ಸಿದ್ದಗಂಗಾ ಮಠ ಸೇರಿದಂತೆ ಬೆಟ್ಟದ ಆಸುಪಾಸಿನಲ್ಲಿ ಕರಡಿ ಪ್ರತ್ಯಕ್ಷವಾಗುತ್ತಿತ್ತು. ಅಲ್ಲದೆ ರಾತ್ರಿ ವೇಳೆ ತೆರಳುವ ಮೆಟ್ಟಿಲುಗಳ ಮೇಲೆ ಓಡಾಡುತ್ತಿದ್ದ ದೃಶ್ಯ ಸಹ ವೈರಲ್ ಆಗಿತ್ತು.
ಸಿದ್ದಗಂಗಾ ಮಠದಿಂದ ದೇವರಾಯನದುರ್ಗಕ್ಕೆ ತೆರಳು ಮಾರ್ಗಮಧ್ಯೆಯೂ ಹಲವು ಬಾರಿ ವಾಹನ ಸವಾರರಿಗೆ ಕರಡಿ ಎದುರಾಗಿತ್ತು. ಆ ಸಂದರ್ಭದಲ್ಲಿ ಪ್ರಯಾಣಿಸುತ್ತಿದ್ದವರು ಕರಡಿ ಓಡುವ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದರು.
ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯಲು ಕಳೆದ 2 ತಿಂಗಳ ಹಿಂದೆಯೇ ಬೋನ್ ಇಟ್ಟಿದ್ದರು. ಈ ಬೋನಿಗೆ ರಾತ್ರಿ ಕರಡಿ ಸೆರೆಯಾಗಿದೆ.
ಕರಡಿ ಬೋನಿಗೆ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ, ಬೋನಿಗೆ ಬಿದ್ದಿರುವ ಕರಡಿ ಸುಮಾರು 5 ವರ್ಷದ ಗಂಡು ಕರಡಿಯಾಗಿದ್ದು, ಈ ಕರಡಿಯನ್ನು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಡುವುದಾಗಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಉರ್ಡಿಗೆರೆ ವಲಯದ ಉಪ ಅರಣ್ಯ ವಲಯಾಧಿಕಾರಿ ಮನು, ಅರಣ್ಯ ಇಲಾಖೆಯು ಇಟ್ಟಿದ್ದ ಬೋನಿಗೆ ಕರಡಿ ಬಿದ್ದಿದ್ದು ಈ ಭಾಗದಲ್ಲಿ ಸಂಚರಿಸುವ ಜನರಿಗೆ ಈಗ ನಿಟ್ಟುಸಿರು ಬಿಡುವಂತಾಗಿದೆ. ರಾತ್ರಿ ವೇಳೆಯಲ್ಲಿ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಜಾಗೃತರಾಗಿರಬೇಕು ಎಂದು ಹೇಳಿದರು.
ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿ ಚಿಕ್ಕ ರಾಜೇಂದ್ರ, ಆರ್‍ಎಫ್‍ಓ ನಟರಾಜ್, ಕೇಶವಮೂರ್ತಿ, ಬಾಲಕೃಷ್ಣ , ನರಸಿಂಹರಾಜು, ರಾಘವೇಂದ್ರ ಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
