ಡೆಹ್ರಾಡೂನ್:
ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಒಂದು ಅಸಹ್ಯಕರ ಘಟನೆ ನಡೆದಿದ್ದು, ಇದು ಆಹಾರದ ಸುರಕ್ಷತೆಯ ಬಗ್ಗೆ, ವಿಶೇಷವಾಗಿ ಬೀದಿಬದಿ ಆಹಾರ ತಿನ್ನುವ ಬಗ್ಗೆ ಭಯವನ್ನು ಹೆಚ್ಚಿಸಿದೆ. ಜ್ಯೂಸ್ ಮಾರಾಟಗಾರನೊಬ್ಬ ತನ್ನ ಗುಪ್ತಾಂಗವನ್ನು ಬಟ್ಟೆಯಿಂದ ಸ್ವಚ್ಛಗೊಳಿಸಿ, ನಂತರ ಜ್ಯೂಸ್ ತಯಾರಿಸಲು ಬಳಸಿದ ಪಾತ್ರೆಯಲ್ಲಿ ಅದೇ ಬಟ್ಟೆಯನ್ನು ಬಳಸುತ್ತಿರುವುದನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಈ ಕಿಡಿಗೇಡಿಯ ಹೀನ ಕೃತ್ಯದ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಕಿಡಿಕಾರಿದ್ದಾರೆ.
ಜನರು ಆರೋಗ್ಯಕರ ಎಂದು ಭಾವಿಸಿ ಸೇವಿಸುವ ಹಣ್ಣಿನ ರಸವು ಯಾವ ರೀತಿ ಅನೈರ್ಮಲ್ಯದಿಂದ ಕೂಡಿರುತ್ತದೆ ಎಂಬುದಕ್ಕೆ ಈ ವಿಡಿಯೊ ಸಾಕ್ಷಿಯಾಗಿದೆ. ಆ ವ್ಯಕ್ತಿಯು ಈ ನಾಚಿಕೆಗೇಡಿನ ಕೃತ್ಯದಲ್ಲಿ ತೊಡಗಿರುವುದನ್ನು ಗಮನಿಸಿದ ಮಹಿಳೆಯೊಬ್ಬಳು ಆತನನ್ನು ಎದುರಿಸಿದ್ದಾಳೆ. ಅಷ್ಟೇ ಅಲ್ಲ, ಮಹಿಳೆಯು ಘಟನೆಯ ದೃಶ್ಯವನ್ನು ತನ್ನ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿದ್ದು, ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾಳೆ. ವಿಡಿಯೊ ವೈರಲ್ ಆದ ಕೂಡಲೇ ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಂಡಿದ್ದು, ಜ್ಯೂಸ್ ಅಂಗಡಿಯನ್ನು ಬಂದ್ ಮಾಡಿಸಿದ್ದಾರೆ. ಇನ್ಮುಂದೆ ಜ್ಯೂಸ್ ಮಾರಾಟ ಮಾಡದಂತೆ ಆತನನ್ನು ಎಚ್ಚರಿಸಿದ್ದಾರೆ ಎನ್ನಲಾಗಿದೆ.
ಆ ಬಟ್ಟೆಯಿಂದ ಅವನು ತನ್ನ ಖಾಸಗಿ ಅಂಗವನ್ನು ಸ್ವಚ್ಛಗೊಳಿಸುವುದನ್ನು ತಾನು ನೋಡಿದ್ದೇನೆ. ನಂತರ ಅದೇ ಬಟ್ಟೆಯನ್ನು ಜ್ಯೂಸ್ ತಯಾರಿಸಲು ಬಳಸುವ ಪಾತ್ರೆಯಲ್ಲಿ ಇಟ್ಟುಕೊಂಡಿದ್ದಾನೆ ಎಂದು ಮಹಿಳೆ ವಿಡಿಯೊದಲ್ಲಿ ಹೇಳಿದ್ದಾರೆ. ಅವನ ನಾಚಿಕೆಗೇಡಿನ ಕೃತ್ಯದ ಬಗ್ಗೆ ಕೇಳಿದಾಗ ಏನೋ ಸಬೂಬು ನೀಡಿದ್ದಾನೆ. ಸುಳ್ಳು ಹೇಳಿದರೆ ಕಪಾಳಮೋಕ್ಷ ಮಾಡುವುದಾಗಿಯೂ ಅವಳು ಬೆದರಿಕೆ ಹಾಕಿದ್ದಾಳೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಆರೋಪಿಯು ತನ್ನ ಹೊಟ್ಟೆಯ ಕೆಳಭಾಗದಲ್ಲಿ ಹುಣ್ಣು ಇದ್ದು, ಅದನ್ನು ಸ್ವಚ್ಛಗೊಳಿಸುತ್ತಿದ್ದನೆಂದು ವಿವರಿಸಿದ್ದಾನೆ.
ಆ ಮಹಿಳೆ ತನ್ನ ಹುಣ್ಣನ್ನು ಸ್ವಚ್ಛಗೊಳಿಸಲು ಇದು ಸರಿಯಾದ ಸ್ಥಳವಲ್ಲ. ಚರಂಡಿಗೆ ಹೋಗಿ ಅಲ್ಲಿ ತನ್ನನ್ನು ತಾನು ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ಕೋಪದಿಂದ ಪ್ರತಿಕ್ರಿಯಿಸಿದ್ದಾಳೆ. ಈ ವೇಳೆ ಜ್ಯೂಸ್ ತಯಾರಕನು ತನ್ನ ಕೈಗಳನ್ನು ಮಡಚಿ ಈ ವಿಷಯವನ್ನು ಇಲ್ಲಿ ಬಿಟ್ಟುಬಿಡುವಂತೆ ಮಹಿಳೆಯ ಬಳಿ ಕೇಳಿಕೊಂಡಿದ್ದಾನೆ. ಆದರೆ, ಆತ ಅನೈರ್ಮಲ್ಯವಾಗಿ ಜ್ಯೂಸ್ ತಯಾರಿಸುತ್ತಿರುವುದರಿಂದ ವಿಷಯವನ್ನು ಅಲ್ಲಿಗೇ ಬಿಟ್ಟು ಬಿಡದ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಜ್ಯೂಸ್ ಮಾರಾಟಗಾರನ ನಾಚಿಕೆಗೇಡಿನ ಕೃತ್ಯಕ್ಕಾಗಿ ದಂಡ ವಿಧಿಸಲಾಗಿದೆ ಎಂದು ಹೇಳಲಾಗಿದೆ.
