ತುಮಕೂರು
ಜನರಲ್ಲಿ ಬೀದಿ ನಾಯಿಗಳ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊದ ಮೊದಲು ಬೆಂಗಳೂರಿನಲ್ಲಿದ್ದ ಈ ಆತಂಕ ಇದೀಗ ಪಕ್ಕದ ಜಿಲ್ಲೆ ತುಮಕೂರಿಗೂ ವ್ಯಾಪಿಸಿದೆ. ರಾತ್ರಿ ಓಡಾಡುವುದಲ್ಲಾ, ಬೆಳಿಗ್ಗೆ ಹೊತ್ತಲ್ಲೂ ಆಚೆ ಕಾಲಿಡುವುದಕ್ಕೆ ಭಯ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ನೈಜ ಉದಾಹರಣೆ ಎಂಬಂತೆ ಹಾಡಹಗಲೇ ಕೋರ್ಟ್ ಆವರಣದಲ್ಲಿ ಮಹಿಳೆಯೊಬ್ಬರ ಮೇಲೆ ಬೀದಿ ನಾಯಿ ದಾಳಿ, ಮುಖ ಮೂತಿ ಕಚ್ಚಿ ಗಾಯಗೊಳಿಸಿದೆ. ಸದ್ಯ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸ್ಥಳೀಯರು ನಾಯಿಯನ್ನು ಹೊಡೆದು ಕೊಂದಿದ್ದಾರೆ.
ಶನಿವಾರದಂದು ಗುಬ್ಬಿ ಕೋರ್ಟ್ ಆವರಣದಲ್ಲಿ ಮಹಿಳೆಯೊಬ್ಬರ ಮೇಲೆ ಬೀದಿ ನಾಯಿಯೊಂದು ದಾಳಿ ಮಾಡಿ, ಮುಖಕ್ಕೆ ಕಚ್ಚಿಗಾಯಗೊಳಿಸಿದೆ. ಸದ್ಯ ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ತಿಪಟೂರು ತಾಲೂಕಿನ ಕೆಬಿ ಕ್ರಾಸ್ ಬಳಿಯ ಬೀರಸಂದ್ರದ ನಿವಾಸಿ ಗಂಗಾಭವಾನಿ ನಾಯಿ ದಾಳಿಗೊಳಗಾದವರು.
ಗಂಗಾಭವಾನಿ ಗಾರೆ ಕೆಲಸ ಮಾಡುವ ಮಹಿಳೆ. ಕಳೆದ ಒಂದುವರೆ ವರ್ಷದ ಹಿಂದೆ ವಿವಾಹವಾಗಿದ್ದು, ಬಳಿಕ ಸಂಸಾರದಲ್ಲಿ ಬಿರುಕು ಮೂಡಿತ್ತಂತೆ. ಇದರಿಂದ ಗಂಡ ಕೋರ್ಟ್ನಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರಂತೆ. ಹಾಗಾಗಿ ಗಂಗಾಭವಾನಿ ಅವರಿಗೆ ನೋಟಿಸ್ ಬಂದಿತ್ತಂತೆ.
ಆ ನೋಟಿಸ್ಗೆ ಉತ್ತರವಾಗಿ ಇದೇ ಮೊದಲ ಬಾರಿಗೆ ಗಂಗಾಭವಾನಿ, ತನ್ನ ಸಹೋದರ ಲಿಖಿತ್ ಜೊತೆ ಕೋರ್ಟ್ಗೆ ಬಂದಿದ್ದಾರೆ. ವಕೀಲರಿಗೆ ಮಾಹಿತಿ ನೀಡಿ ಶೌಚಾಲಯಕ್ಕೆ ಹೋಗಿದ್ದಾರೆ. ಶೌಚಾಲಯಕ್ಕೆ ಹೋದ ಕೆಲವೇ ನಿಮಿಷದಲ್ಲಿ ಚೀರಾಡಿದ್ದಾರೆ. ಕಾರಣ ಅಲ್ಲೇ ಇದ್ದ ಬೀದಿನಾಯಿಯೊಂದು ಅವರ ಮೇಲೆ ದಾಳಿ ಮಾಡಿದೆ. ಕೂಡಲೇ ಸಹೋದರ ಕೂಡ ಅವರ ರಕ್ಷಣೆಗೆ ಹೋಗಿದ್ದು, ಈ ವೇಳೆ ನಾಯಿ ಅವರ ಕೈಗಳಿಗೂ ಕಚ್ಚಿದೆ.
ಘಟನೆ ಹಿನ್ನಲೆ ಗುಬ್ಬಿ ಕೋರ್ಟ್ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಅಲ್ಲೇ ಇದ್ದ ಕೆಲ ಸ್ಥಳೀಯರು ದಾಳಿ ಮಾಡಿದ ಬೀದಿನಾಯಿಯನ್ನು ಹತ್ಯೆ ಮಾಡಿದ್ದಾರೆ. ಗಂಗಾಭವಾನಿ ಅವರ ಕಣ್ಣಿನ ಭಾಗದಲ್ಲಿ ಗಂಭೀರ ಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೀದಿನಾಯಿಗಳ ಅಟ್ಟಾಹಾಸಕ್ಕೆ ಜನರಲ್ಲಿ ಆತಂಕ ಸೃಷ್ಟಿಯಾಗಿರುವುದು ಸುಳ್ಳಲ್ಲ.








