ಮಗು ಮುಂದಿಟ್ಟುಕೊಂಡು ಭಿಕ್ಷೆ

ತುಮಕೂರು:

  ಮಹಿಳೆ ಬಂಧನ-ಮಗು ರಕ್ಷಣೆ

 ಮಗುವನ್ನು ಮುಂದಿಟ್ಟುಕೊಂಡು ಭಿಕ್ಷಾಟನೆಗೆ ಇಳಿದಿದ್ದ ಮಹಿಳೆಯೊಬ್ಬರ ಮೇಲೆ ಪೊಲೀಸ್ ಕೇಸು ದಾಖಲಾಗಿದ್ದು, ಭಿಕ್ಷಾಟನೆಗೆ ಬಳಸುತ್ತಿದ್ದ ಮಗುವನ್ನು ಸಂರಕ್ಷಿಸಲಾಗಿದೆ ಹಾಗೂ ಕೃತ್ಯಕ್ಕೆ ತೊಡಗಿಕೊಂಡಿದ್ದ ಮಹಿಳೆಯನ್ನು ಬಂಧಿಸಲಾಗಿದೆ.

ಬಟವಾಡಿ ವೃತ್ತದ ಸಿಗ್ನಲ್‍ನಲ್ಲಿ ಸಣ್ಣಕ್ಕ ಎಂಬ ಮಹಿಳೆ ಭಿಕ್ಷೆ ಬೇಡುತ್ತಿದ್ದಳು. ಸದರಿ ಮಹಿಳೆಯನ್ನು ಕಳೆದ ಒಂದು ತಿಂಗಳಿನಿಂದ ಗಮನಿಸಿರುವ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ಮಗುವನ್ನು ಮುಂದಿಟ್ಟುಕೊಂಡು ಭಿಕ್ಷೆಗೆ ಇಳಿದಿರುವುದನ್ನು ತಪ್ಪಿಸಲು ಕೂಡಲೇ ತಮ್ಮ ಸಿಬ್ಬಂದಿಗೆ ಕರೆ ಮಾಡಿ ಆಕೆಯ ಚಲನವಲನ ಗಮನಿಸಲು ತಿಳಿಸಿದ್ದಾರೆ.

ಆಕೆಯನ್ನು ಮಾತನಾಡಿಸಲು ಹೋದಾಗ ತಪ್ಪಿಸಿಕೊಂಡು ಹೋದದ್ದು ಇವೆಲ್ಲವೂ ಅನುಮಾನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಎಸ್.ಐ.ಟಿ. ಹಾಗೂ ಬಟವಾಡಿ ಬಳಿ ಗಮನಿಸಿದಾಗ ಮತ್ತೆ ಅದೇ ಸ್ಥಳದಲ್ಲಿ ಭಿಕ್ಷೆ ಬೇಡುತ್ತಿರುವುದು ಗಮನಕ್ಕೆ ಬಂದಿದೆ. ಎಸ್.ಐ.ಟಿ. ಕಾಲೇಜಿನ ಹಿಂಭಾಗದ ಗಂಗೋತ್ರಿ ರಸ್ತೆಯಲ್ಲಿ ಅಂಗಡಿಗಳಲ್ಲಿ ಭಿಕ್ಷೆ ಬೇಡುತ್ತಿರುವಾಗ ರಕ್ಷಣಾ ಘಟಕದ ಸಿಬ್ಬಂದಿ ಅಲ್ಲಿಗೆ ತೆರಳಿ ಆಕೆಯನ್ನು ವಶಕ್ಕೆ ಪಡೆದು ಕಛೇರಿಗೆ ಕರೆತಂದಿದ್ದಾರೆ.

ಆ ಸಮಯದಲ್ಲಿ ತಾನು ಇಸ್ಮಾಯಿಲ್ ನಗರದ ಮಹಿಳೆ ಎಂದು ಹೇಳಿಕೊಂಡಿದ್ದಾಳೆ. ಎರಡು ವರ್ಷದ ಬಾಲಕಿಯನ್ನು ಮುಂದಿಟ್ಟುಕೊಂಡು ಭಿಕ್ಷಾಟನೆಗೆ ಇಳಿದಿರುವುದನ್ನು ಖಾತ್ರಿ ಪಡಿಸಿಕೊಂಡಿದ್ದಾರೆ. ಅಲ್ಲದೆ, ಇದೇ ಮಹಿಳೆ ಈ ಹಿಂದೆ ಎರಡು ಮೂರು ಬಾರಿ ಟ್ರಾಫಿಕ್ ಸಿಗ್ನಲ್‍ನಲ್ಲಿ ಕಂಡು ಬಂದಾಗ ತಿಳವಳಿಕೆ ನೀಡಿ ಎಚ್ಚರಿಕೆ ಕೊಟ್ಟಿದ್ದರೂ ಸಹ ಭಿಕ್ಷಾಟನೆ ಕಾರ್ಯವನ್ನು ಮುಂದುವರೆಸಿರುವುದರಿಂದ ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ಹೊಸ ಬಡಾವಣೆ ಪೊಲೀಸರ ಗಮನಕ್ಕೆ ತಂದಿದ್ದಾರೆ.

ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಭಾರತ ದಂಡ ಸಂಹಿತೆ ಕಲಂ 370 ಹಾಗೂ ಬಾಲ ನ್ಯಾಯ ಕಾಯಿದೆ ಕಲಂ 75 ಮತ್ತು 76ರ ಅಡಿಯಲ್ಲಿ ಕೇಸು ದಾಖಲಾಗಿದೆ. ಮಕ್ಕಳ ರಕ್ಷಣಾ ಘಟಕದಿಂದ ಮಗುವನ್ನು ಸಂರಕ್ಷಿಸಲಾಗಿದ್ದು, ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ