ಬೆಳಗಾವಿ:
ಬೆಳಗಾವಿಯಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಹೆಚ್ಚುತ್ತಿರುವ ಜಗಳ ಕಾಂಗ್ರೆಸ್ ವರಿಷ್ಠರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಭವನ ನಿರ್ಮಾಣದ ಸಂಪೂರ್ಣ ಹೆಗ್ಗಳಿಕೆಯನ್ನು ಹೆಬ್ಬಾಳ್ಕರ್ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿತ್ತು. ಆದರೆ ಜಾರಕಿಹೊಳಿ ಸಹೋದರರು ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.
ಬೆಳಗಾವಿಯಲ್ಲಿ ಕಾಂಗ್ರೆಸ್ ಭವನ ಆಗಲು ಲಕ್ಷ್ಮೀ ಹೆಬ್ಬಾಳ್ಕರ್ ಕಾರಣ ಎಂದು ಸಿಎಲ್‌ಪಿ ಸಭೆಯಲ್ಲಿ ಶಿವಕುಮಾರ್ ಹೇಳಿಕೆ ನೀಡಿದ್ದರು, ಇದರಿಂದ ಸತೀಶ್ ಜಾರಕಿಹೊಳಿ ಕೆರಳಿ ಕೆಂಡವಾಗಿದ್ದರು. ಈ ವಿಷಯದ ಸಂಬಂಧ ಡಿ.ಕೆ ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ನಡುವೆ ಮಾತಿನ ಚಕಮಕಿ ಕೂಡ ನಡೆದಿತ್ತುಎಂದು ಮೂಲಗಳು ತಿಳಿಸಿವೆ.
ಬೆಳಗಾವಿ ರಾಜಕೀಯದಲ್ಲಿ ಹೆಬ್ಬಾಳ್ಕರ್ ಮತ್ತು ಹಲವಾರು ನಾಯಕರು ಈ ವಿಷಯವನ್ನು ಪಕ್ಷದ ಹೈಕಮಾಂಡ್ ಮುಂದೆ ತರಲು ಯೋಜಿಸಿದ್ದರು . ಬೆಳಗಾವಿ ಜಿಲ್ಲಾ ಸಚಿವರಾಗಿದ್ದರೂ, ಇಬ್ಬರೂ ಜಿಲ್ಲೆಯ ಅಧಿಕೃತ ಯಂತ್ರದ ಮೇಲೆ ಅನಗತ್ಯ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದರು.
ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಬಳಸಿದ ಆರೋಪದ ಮೇಲೆ ಬಿಜೆಪಿ ಎಂಎಲ್ಸಿ ಸಿ ಟಿ ರವಿ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಹೆಬ್ಬಾಳ್ಕರ್ ಮತ್ತು ಶಿವಕುಮಾರ್ ಬೆಳಗಾವಿಯಲ್ಲಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಜಾರಕಿಹೊಳಿ ಆರೋಪಿಸಿದ್ದಾರೆ.
ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಗಾಂಧಿ ಭಾರತ್ ಕಾರ್ಯಕ್ರಮದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರನ್ನು ಶಿವಕುಮಾರ್ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿರುವ ಅವರು ಯಾವುದೇ ಕಾರಣವಿಲ್ಲದೆ ಹೆಬ್ಬಾಳ್ಕರ್ ಅವರಿಗೆ ಬೆಳಗಾವಿಯಲ್ಲಿ ಬಡ್ತಿ ನೀಡಲಾಗುತ್ತಿದೆ ಎಂದು ಜಾರಕಿಹೊಳಿ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಕಾಂಗ್ರೆಸ್ ಭವನ ನಿರ್ಮಾಣಕ್ಕೆ ನಾನು ದೊಡ್ಡ ಮೊತ್ತವನ್ನು ದೇಣಿಗೆ ನೀಡಿದ್ದೇನೆ. ಈ ಭವನವನ್ನು ಯಾವುದೇ ಒಬ್ಬ ನಿರ್ದಿಷ್ಟ ನಾಯಕ ನಿರ್ಮಿಸಿಲ್ಲ. ಶಿವಕುಮಾರ್ ಬೆಳಗಾವಿ ರಾಜಕೀಯದಲ್ಲಿ ತಮ್ಮ ಹಸ್ತಕ್ಷೇಪ ಮುಂದುವರಿಸಿದರೆ ನಾವು ಸುಮ್ಮನಿರುವುದಿಲ್ಲ ಅವರು ಹೇಳಿದರು.
ಈ ವಿಷಯದ ಬಗ್ಗೆ ಚರ್ಚಿಸಲು ಜಾರಕಿಹೊಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕನಿಷ್ಠ ಒಂದು ಗಂಟೆ ಸಭೆ ನಡೆಸಿದರು. ಬೆಳಗಾವಿಯಲ್ಲಿ ಶಿವಕುಮಾರ್ ಅವರ ಹಸ್ತಕ್ಷೇಪದ ವಿಷಯವನ್ನು ಜಾರಕಿಹೊಳಿ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಗಮನಕ್ಕೆ ತಂದರು ಎಂದು ಮೂಲಗಳು ತಿಳಿಸಿವೆ. ಶಿವಕುಮಾರ್ ತಮ್ಮ ಈ ಆಟ ಮುಂದುವರಿಸಿದರೆ ತಾವು ಸುಮ್ಮನಿರುವುದಿಲ್ಲ ಎಂದು ಅವರು ನಾಯಕರಿಗೆ ಸ್ಫಷ್ಟನೆ ನೀಡಿದ್ದಾರೆ. ತಮ್ಮ ವರ್ಚಸ್ಸನ್ನು ರಕ್ಷಿಸಲು ನಾವು ಕೂಡ ಏನಾದರೂ ಮಾಡುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ (ಬಿಜೆಪಿ) ತಮ್ಮ ಸಹೋದರ ಸತೀಶ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೇಳಿಕೆಗಳು ಸುಳ್ಳು ಎಂದು ಆರೋಪಿಸಿದ್ದಾರೆ. “ನಾನು 2013 ರಿಂದ 2018 ರವರೆಗೆ ಕಾಂಗ್ರೆಸ್‌ನಲ್ಲಿದ್ದೆ ಮತ್ತು ಕಾಂಗ್ರೆಸ್ ಭವನ ನಿರ್ಮಾಣ ಮಾಡಲು ದೊಡ್ಡ ನಿವೇಶನವನ್ನು ಮಂಜೂರು ಮಾಡಿಸಿಕೊಂಡೆ” ಎಂದು ಅವರು ಹೇಳಿದರು.
ನನ್ನ ಜೇಬಿನಿಂದ ಭವನಕ್ಕಾಗಿ ನಿವೇಶನ ಖರೀದಿಸಲು 27 ಲಕ್ಷ ರೂ.ಗಳನ್ನು ಪಾವತಿಸಿದ್ದೆ. ಆಗಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾದ ಕೂಡಲೇ ನಿರ್ಮಾಣಕ್ಕಾಗಿ ಮತ್ತೊಂದು 1 ಕೋಟಿ ರೂ.ಗಳನ್ನು ನೀಡಿದ್ದೇನೆ” ಎಂದು ಅವರು ಹೇಳಿದರು.
ಸಿಎಲ್‌ಪಿ ಸಭೆಯಲ್ಲಿ ತಮ್ಮ ಸಹೋದರ ಮತ್ತು ಶಿವಕುಮಾರ್ ನಡುವೆ ಏನಾಯಿತು ಎಂಬುದರ ಕುರಿತು ಕೆಲವು ಉನ್ನತ ಕಾಂಗ್ರೆಸ್ ನಾಯಕರಿಂದ ಮಾಹಿತಿಯನ್ನು ಪಡೆದುಕೊಂಡಿದ್ದೇನೆ ಎಂದು ಅವರು ಹೇಳಿದರು. ಶಿವಕುಮಾರ್ ಅವರ ಹೇಳಿಕೆಗೆ ಸತೀಶ್ ಎತ್ತಿದ ಆಕ್ಷೇಪಣೆಯನ್ನು ನಾನು ಪ್ರಶಂಸಿಸುತ್ತೇನೆ ವಾಸ್ತವಾಂಶ ಬಿಚ್ಚಿಡುತ್ತೇನೆ ಎಂದಿದ್ದಾರೆ.