
ಬೆಳಗಾವಿ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿಗೆ 37 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 1.25 ಲಕ್ಷ ರೂ. ದಂಡ ವಿಧಿಸಿ ಇಲ್ಲಿನ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮದ ತನೋಜ್ ಬಾಬು ಗಾಡಿವಡ್ಡರ (20) ಶಿಕ್ಷೆಗೆ ಗುರಿಯಾದವ.
ಬೆಳಗಾವಿ ನಗರದ ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ. ಬಳಿಕ ಬಾಲಕಿಯು ಗರ್ಭಿಣಿಯಾಗಿ, ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿತ್ತು. ಈ ವೇಳೆ ಬಾಲಕಿ ತಂದೆಯು ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯ-1, ಎಫ್.ಟಿ.ಎಸ್.ಸಿ-1ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ ಎಂ ಪುಷ್ಪಲತಾ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎಪ್ರಿಲ್ 9ರಂದು ಆರೋಪಿಗೆ 37 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 1 ಲಕ್ಷದ 25 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್. ವಿ. ಪಾಟೀಲ ವಾದ ಮಂಡಿಸಿದ್ದರು. ನೊಂದ ಬಾಲಕಿಗೆ ನ್ಯಾಯ ಕೊಡಿಸುವಲ್ಲಿ ಹಾಗೂ ಆರೋಪಿತನಿಗೆ ಶಿಕ್ಷೆಯಾಗುವ ನಿಟ್ಟಿನಲ್ಲಿ ತನಿಖೆ ಕೈಗೊಂಡು ಶ್ರಮಿಸಿದ ಸರ್ಕಾರಿ ಅಭಿಯೋಜಕರು, ಶಹಾಪೂರ ಪೊಲೀಸ್ ಠಾಣೆಯ ಪಿಐ ಸಿದ್ದಪ್ಪ ನಿಮಾನಿ ಹಾಗೂ ತನಿಖಾ ಸಹಾಯಕರಾದ ಎಎಸ್ಐ ಬಿ.ಎ. ಚೌಗಲಾ, ಸಿಬ್ಬಂದಿಗಳಾದ ನಾಗರಾಜ ಓಸಪ್ಪಗೋಳ, ಸುರೇಶ ಲೋಕುರೆ ಅವರ ತಂಡಕ್ಕೆ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.








